ADVERTISEMENT

ಶಾಸಕ ದತ್ತಾತ್ರೇಯ ‌ಪಾಟೀಲ ವಿರುದ್ಧ ‌ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮೇ 2020, 10:16 IST
Last Updated 29 ಮೇ 2020, 10:16 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಕಲಬುರ್ಗಿ: ಹಣ ನೀಡುವಂತೆ ಇಲ್ಲಿನ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರಿಗೆ ಬೇಡಿಕೆ ಇಟ್ಟ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ವಿರೋಧ ಪಕ್ಷದ ‌ನಾಯಕ ಸಿದ್ದರಾಮಯ್ಯ ಅವರು, ಹಣ ಕೊಡದಿದ್ದರೆ‌ ವರ್ಗಾವಣೆ ‌ಮಾಡಿಸುವುದಾಗಿ ಧಮ್ಕಿ ಹಾಕಿದ್ದು ಗೂಂಡಾ ಪ್ರವೃತ್ತಿ ಎಂದು ಟೀಕಿಸಿದ್ದಾರೆ.

ಈ ಕುರಿತು ವಿಡಿಯೊ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು, ಶಾಸಕರ ಪರವಾಗಿ ಪಾಲಿಕೆಯ ನಿಟಕಪೂರ್ವ ಸದಸ್ಯ ಪ್ರಭು ಹಾದಿಮನಿ ಸಂಗಾ ಅವರಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಂಗಾ ದೂರು ನೀಡಲು ಹೋದಾಗ ಎಫ್ಐಆರ್ ದಾಖಲಿಸಿಕೊಳ್ಳದ ಪೊಲೀಸರ ಕ್ರಮಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೂಡಲೇ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಪ್ರಭು ಹಾದಿಮನಿಯನ್ನು ಬಂಧಿಸಬೇಕು‌ ಎಂದು ಪೊಲೀಸ್ ‌ಕಮಿಷನರ್ ಸತೀಶಕುಮಾರ್ ‌ಎನ್. ಅವರಿಗೆ ಕರೆ ಮಾಡಿ ಒತ್ತಾಯಿಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿಗೆ ತರಾಟೆ: ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ ಅವರು, ಅಧಿಕಾರಿಯನ್ನು ರಕ್ಷಿಸಲು ಆಗಲಿಲ್ಲವೆಂದರೆ ಆ ಹುದ್ದೆಯಲ್ಲಿ ಏಕೆ ಮುಂದುವರಿದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ‌.

'ನೀವು ಜಿಲ್ಲೆಯ ಮುಖ್ಯಸ್ಥರು. ನಿಮ್ಮ ಅಧೀನದಲ್ಲಿ ‌ಕೆಲಸ ಮಾಡುವ ಜಿಲ್ಲಾ ಮಟ್ಟದ ಅಧಿಕಾರಿಗೇ ಜೀವ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುವ ಬದಲು ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.