ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೆ ಕಾಂಗ್ರೆಸ್ ಹೈಕಮಾಂಡ್ ಸತತ ಮೂರು ದಿನಗಳ ಕಾಲ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆಯ ಕಗ್ಗಂಟನ್ನು ಬಗೆಹರಿಸಿದ್ದು, 24 ಶಾಸಕರು ಸಂಪುಟಕ್ಕೆ ಇಂದು ಸೇರ್ಪಡೆಯಾಗಲಿದ್ದಾರೆ.
ಉಭಯ ಸದನಗಳ ಸದಸ್ಯರೂ ಅಲ್ಲದ ಪಕ್ಷದ ಹಿರಿಯ ಮುಖಂಡ ಎನ್.ಎಸ್.ಬೋಸರಾಜು ಅವರಿಗೆ ಸಚಿವರಾಗುವ ‘ಭಾಗ್ಯ’ ದೊರಕಿದೆ. ಸಚಿವರಾಗುವ ‘ಗ್ಯಾರಂಟಿ’ಯಲ್ಲಿದ್ದ ಹಲವು ಹಿರಿಯ ಶಾಸಕರಿಗೆ ಅವಕಾಶ ಕೈ ತಪ್ಪಿದೆ.
ನೂತನ ಸಚಿವರ ಪ್ರಮಾಣವಚನ ಸಮಾರಂಭ ಇಂದು (ಶನಿವಾರ) ಬೆಳಿಗ್ಗೆ 11.45ಕ್ಕೆ ರಾಜಭವನದಲ್ಲಿ ನಡೆಯಲಿದೆ. ಪ್ರಮಾಣವಚನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜಭವನಕ್ಕೆ ಶುಕ್ರವಾರ ಮಧ್ಯಾಹ್ನವೇ ಮುಖ್ಯಮಂತ್ರಿ ಸಚಿವಾಲಯ ಸಂದೇಶ ರವಾನಿಸಿತ್ತು. ನೂತನ ಸಚಿವರ ಪಟ್ಟಿಯನ್ನು ಶುಕ್ರವಾರ ರಾತ್ರಿ ರಾಜಭವನಕ್ಕೆ ಕಳುಹಿಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಹಾಗೂ ಎಂಟು ಶಾಸಕರು ಸಚಿವರಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಯ ಸೇರ್ಪಡೆಗೆ ಅವಕಾಶ ಇದೆ. 24 ಮಂದಿಯ ಸೇರ್ಪಡೆಯಿಂದ ಸಂಪುಟ ಭರ್ತಿಯಾದಂತೆ ಆಗುತ್ತದೆ.
ಎರಡು ವರ್ಷದ ಬಳಿಕ ಸಂಪುಟ ಪುನಾರಚರಣೆ ಮಾಡಿ ನಿಮಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಕೂಡಲೇ ಕೆಲವು ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರನ್ನು ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಸಮತೋಲನ ಕಾಪಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.