ADVERTISEMENT

ಬಿಎಸ್‌ವೈ ಗೂಟ ಹೊಡೆದುಕೊಂಡಿರಲ್ಲ: ಪೊಲೀಸರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 12:26 IST
Last Updated 15 ಫೆಬ್ರುವರಿ 2020, 12:26 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಯಡಿಯೂರಪ್ಪನವರೇ ಶಾಶ್ವತವಾಗಿ ಗೂಟ ಹೊಡೆದುಕೊಂಡಿರಲ್ಲ. ನೀವು ಇರೋದು ಶಾಂತಿ ಕಾಪಾಡೋಕೆ. ಅದನ್ನ ಬಿಟ್ಟು ಬಿಜೆಪಿ ಮಾತು ಕೇಳಿ ಕಾನೂನು ದುರುಪಯೋಗ ಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಬೀದರ್ ಶಾಲೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಪೊಲೀಸರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ನಿಜವಾದ ದೇಶದ್ರೋಹ ಮಾಡುವವರು ಬಿಜೆಪಿಯವರು. ಮಂಗಳೂರಿನಲ್ಲಿ ಗೋಲಿಬಾರ್ ಆಯ್ತು. ಅದಕ್ಕೆ ನಮ್ಮ ಶಾಸಕ ಖಾದರ್ ಮೇಲೆ ಕೇಸ್ ಹಾಕಿದ್ದಾರೆ. ಮೈಸೂರಿನಲ್ಲಿ ಫ್ರೀ ಕಾಶ್ಮೀರ ಅಂತ ಹೆಣ್ಣುಮಗಳು ಹೇಳಿದ್ದಕ್ಕೆ ದೇಶದ್ರೋಹದ ಕೇಸ್ ಹಾಕಿದ್ದಾರೆ. ಬೀದರ್ ಶಾಹೀನ್ ಶಾಲೆಯಲ್ಲಿ ನಾಟಕ ಮಾಡಿದ್ದಕ್ಕೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹೆಣ್ಣುಮಗು ನಾಟಕ ಮಾಡಿದೆ. ಅದರಲ್ಲಿ ದಾಖಲೆ ಕೇಳಿದರೆ ನಾನು ಸ್ಮಶಾನಕ್ಕೆ ಹೋಗಿ ಬಗೆದು ತರಲಾ? ಕೇಳೋಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಅಂದಿದ್ದಾಳೆ. ಅದು ಮೋದಿಗೆ ಹೇಳಿದ್ದಾ? ಆ ಮಗುವಿನ ಮೇಲೆ ಕೇಸ್ ಹಾಕಿದ್ದಾರೆ. ಹಿರಣ್ಣಯ್ಯ ಎಷ್ಟು ವಿಡಂಬನೆ ಮಾಡಿದ್ದಾರೆ. ಅವರ ಮೇಲೆ ಇಲ್ಲಿಯವರೆಗೆ ಯಾರೂ ಕೇಸ್ ಹಾಕಿಲ್ಲ. ಮಗು ಹೇಳಿದೆ ಅಂತ ಪೊಲೀಸರು ಕೇಸ್ ದಾಖಲಿಸುತ್ತಾರೆ. ಗಂಡನಿಲ್ಲದ ಆ ಹೆಣ್ಣಮಗಳು ಮಗುವನ್ನು ಓದಿಸುತ್ತಿದ್ದಾರೆ. ಆ ತಾಯಿಯ ಮೇಲೂ ಕೇಸ್ ಹಾಕುತ್ತಾರೆ ಎಂದು ಹೇಳಿದರು.

ADVERTISEMENT

ಐದು ಬಾರಿ ಮಕ್ಕಳನ್ನು ವಿಚಾರಣೆಗೊಳಪಡಿಸಿದ್ದಾರೆ. 90 ವಿದ್ಯಾರ್ಥಿಗಳಿಗೆ ವಿಚಾರಣೆ ನೆಪದಲ್ಲಿ ಕಿರಿಕಿರಿ ಮಾಡಿದ್ದಾರೆ. ಇದು ಪಬ್ಲಿಕ್ ಅಫೆನ್ಸ್ ಆಗಲಿದೆ. ಮುಖ್ಯಶಿಕ್ಷಕಿ ಮೇಲೂ ಪ್ರಕರಣ ದಾಖಲಿಸುತ್ತಾರೆ. ಆ ಇಬ್ಬರಿಗೆ ನಿನ್ನೆ ಕೋರ್ಟ್ ಜಾಮೀನು ನೀಡಿದೆ. ನಾನು ಜೈಲಿಗೆ ಹೋಗಿ ಅವರನ್ನು ವಿಚಾರಿಸಿದ್ದೇನೆ. ಹೆಣ್ಣುಮಕ್ಕಳನ್ನು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ ಎಂದರು.

ಪೊಲೀಸರು ನಿಸ್ಪಪಕ್ಷಪಾತವಾಗಿ ಕೆಲಸ ಮಾಡ್ತಿಲ್ಲ. ನಮ್ಮ ಪಕ್ಷದವರನ್ನು ಗುರುತಿಸಿ ಕೇಸ್ ಹಾಕುತ್ತಿದ್ದಾರೆ. ಸೋಮಶೇಖರ್ ರೆಡ್ಡಿ ಉಗ್ರವಾದದ ಹೇಳಿಕೆ ಕೊಟ್ಟರು. ಅವರ ಮೇಲೆ ಯಾಕೆ ದೇಶದ್ರೋಹದ ಕೇಸ್ ಹಾಕಲಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಕೆಟ್ಟದಾಗಿ ತೋರಿಸ್ತಾರೆ. ಸುಪ್ರೀಂಕೋರ್ಟ್ ಮಸೀದಿ ಒಡೆದದ್ದು ಕಾನೂನು ಬಾಹಿರ ಎಂದಿದೆ. ಹೀಗಿದ್ದರೂ ಕಲ್ಲಡ್ಕ ಮೇಲೆ ದೇಶದ್ರೋಹದ ಕೇಸ್ ಯಾಕೆ ಹಾಕಲಿಲ್ಲ. ಅಶೋಕ್, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ, ಎಂತದ್ದೋ ಸೂರ್ಯನ ಮೇಲೆ ಯಾವ ಕೇಸ್ ಹಾಕಿದ್ದೀರ? ಪ್ರತಾಪ್ ಸಿಂಹ, ಕಟೀಲ್ ಮೇಲೆ ಕೇಸ್ ಹಾಕಿದ್ದೀರಾ? ಸಂತೋಷ್ ಮೇಲೆ ಯಾವ ಕೇಸ್ ಹಾಕಿದ್ದೀರಾ? ಇದರ ಬಗ್ಗೆ ಮೊದಲು ಪೊಲೀಸರು ಹೇಳಲಿ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಶಾಹೀನ್ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ವಿರುದ್ಧ ಕೇಸ್ ಹಾಕುತ್ತಾರೆ. ನಿನ್ನೆ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ಪೊಲೀಸ್ ಇಲಾಖೆ ದುರ್ಬಳಕೆ ಆಗುತ್ತಿದೆ. ಕಲ್ಲಡಕ ಪ್ರಭಾಕರ್ ಭಟ್ ಮಾತಾಡ್ತಾರೆ. ರೇಣುಕಾಚಾರ್ಯ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸಿ.ಟಿ ರವಿ, ಅನಂತಕುಮಾರ್ ಹೆಗಡೆ ಮಾತನಾಡಿದರೂ ಅವರ ವಿರುದ್ಧ ಯಾವುದೇ ಕೇಸ್ ಇಲ್ಲ. ಆದರೆ ಯು.ಟಿ. ಖಾದರ್ ಮಾತನಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ. ಯಾಕೆ ಹೀಗೆ? ಭಯದ ವಾತಾವರಣ ಸೃಷ್ಟಿ ಮಾಡುವ ಯತ್ನ ನಡೆದಿದೆ. ಕಾಂಗ್ರೆಸ್ ಯಾವಾಗಲೂ ಜನಪರ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಡಿ.ಕೆ. ಸುರೇಶ್ ಸೇರಿ ನೂರಾರು ಕಾರ್ಯಕರ್ತರು ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಸಭೆ ಬಳಿಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಯಿತು. ಪ್ರತಿಭಟನಾನಿರತರು ಮುಖ್ಯಮಂತ್ರಿಗಳ ಕಚೇರಿಯತ್ತ ತೆರಳಲು ಮುಂದಾದಾಗ ರೇಸ್‌ಕೋರ್ಸ್ ರಸ್ತೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.