
ಬೆಂಗಳೂರು: ‘ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ಲ. ಮುಂದಿನ ಎಲ್ಲ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ. ಮುಂದೆಯೂ ಅವರೇ ಮುಖ್ಯಮಂತ್ರಿಯಾಗಿರಬಹುದು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿ. ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳೆಲ್ಲವೂ ಊಹಾಪೋಹ. ಮಾಧ್ಯಮಗಳಲ್ಲಿನ ಚರ್ಚೆಗಳು ಪಕ್ಷದ ಮುಂದೆ ಇಲ್ಲ. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರ ನೇತೃತ್ವದಲ್ಲೇ ಪಕ್ಷ ಕಟ್ಟುತ್ತಿದ್ದೇವೆ’ ಎಂದರು.
‘ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಅಭಿಮಾನಿಗಳು ಆಸೆ ಪಡುವುದು ಸಹಜ. ಕೆಲವರು ಎಚ್.ಡಿ.ಕುಮಾರಸ್ವಾಮಿ, ಮತ್ತೆ ಕೆಲವರು ಬಿ.ವೈ.ವಿಜಯೇಂದ್ರ, ಅಶ್ವತ್ಥನಾರಾಯಣ, ಆರ್.ಅಶೋಕ, ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ. ಆಯಾ ಊರಿನ ಜನರು ತಮ್ಮ ನಾಯಕರು ಆಗಬೇಕು ಎಂದು ಬಯಸುತ್ತಾರೆ. ಕೆಲವರು ವೇದಿಕೆ ಮೇಲೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿ ತಮ್ಮ ಅಭಿಮಾನ ತೋರುತ್ತಾರೆ. ಇವೆಲ್ಲವು ರಾಜಕಾರಣದ ಭಾಗ. ಇಂತಹ ವಿಷಯಗಳ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ’ ಎಂದರು.
‘ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ್ದಾರೆ. ಇಬ್ಬರಿಂದಲೇ ಪಕ್ಷವಲ್ಲ. ಎಂ.ಬಿ.ಪಾಟೀಲ, ಜಿ.ಪರಮೇಶ್ವರ, ಸತೀಶ ಜಾರಕಿಹೋಳಿ, ಎಚ್.ಸಿ.ಮಹದೇವಪ್ಪ ಸೇರಿದಂತೆ ಎಲ್ಲಾ ಸಮುದಾಯದ ನಾಯಕರು ಸೇರಿ ಪಕ್ಷ ಕಟ್ಟಿದ್ದಾರೆ’ ಎಂದು ಹೇಳಿದರು.
‘ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಡಿ.6ರಂದು ನಡೆಯಲಿದೆ. ವಿಚಾರಣೆ ವೇಳೆ ನಮ್ಮ ನಿಲುವು ಏನಿರಬೇಕು ಎಂಬ ಬಗ್ಗೆ ಅಧಿಕಾರಿಗಳು ಮತ್ತು ವಕೀಲರ ಜತೆ ಚರ್ಚೆ ನಡೆಸುವರು. ಇದಕ್ಕಾಗಿ, ವಿಶೇಷ ಪೀಠವೊಂದನ್ನು ಸುಪ್ರೀಂಕೋರ್ಟ್ ರಚಿಸುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.