ADVERTISEMENT

ಸಿದ್ದರಾಮಯ್ಯ ಜವಾಬ್ದಾರಿ ಅರಿತು ಆರೋಪ ಮಾಡಲಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 10:44 IST
Last Updated 10 ನವೆಂಬರ್ 2021, 10:44 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ನವದೆಹಲಿ: ಬಿಟ್ ಕಾಯಿನ್ ಹಗರಣ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಜವಾಬ್ದಾರಿ ಅರಿತು ಹೇಳಿಕೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಕರ್ನಾಟಕ ಭವನದಲ್ಲಿ ಬುಧವಾರ ಮಧ್ಯಾಹ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆರೋಪ ಮಾಡುವವರು ಯಾವುದಾದರೂ ಆಧಾರ ಇಟ್ಟುಕೊಂಡು ಆರೋಪ ಮಾಡಬೇಕು. ಹಗರಣ ಕುರಿತು ಈಗಾಗಲೇ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ಮುಕ್ತವಾದ ತನಿಖೆ ನಡೆಯುತ್ತಿದೆ. ಇನ್ನಷ್ಟು ಮಾಹಿತಿ ಒದಗಿಸಿದರೆ ತನಿಖೆ ನಡೆಸಲು ಸಿದ್ಧ ಎಂದು ಅವರು ಹೇಳಿದರು.

ADVERTISEMENT

ಬಿಟ್ ಕಾಯಿನ್ ಹಗರಣಕ್ಕೆ‌ ಸಂಬಂಧಿಸಿದಂತೆ‌ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ವಿವರಣೆ ಅಥವಾ ಮಾಹಿತಿ ಕೇಳಿಲ್ಲ ಎಂದು ಅವರು ತಿಳಿಸಿದರು.

ಗಣಿಗಾರಿಕೆ ಆರಂಭ: ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚಿಸಲಾಗಿದ್ದು, ಒಡಿಶಾದ ಮಂದಕರಿಯಲ್ಲಿನ ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರಕ್ಕೆ ಗುತ್ತಿಗೆ ದೊರೆತಿದೆ. ಕೇಂದ್ರದ ಪರಿಸರ ಅನುಮತಿಯೂ ದೊರೆತಿದೆ. ಶೀಘ್ರವೇ ಗಣಿಗಾರಿಕೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಸದ್ಯಕ್ಕೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ. ಗಣಿಗಾರಿಕೆ ಆರಂಭವಾದ‌ ನಂತರ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಲಭ್ಯವಾಗಲಿದೆ. ಮಹಾರಾಷ್ಟ್ರದ ಗಣಿಯಿಂದಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಆರಂಭಿಸಲು ಕೇಂದ್ರದ ಪರಿಸರ ಅನುಮತಿ ಮಾತ್ರವಲ್ಲದೆ, ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ‌ ಪ್ರಾಧಿಕಾರದ ಅನುಮತಿಯೂ ಬೇಕಿದೆ. ಆದರೂ ವಿನಾಕಾರಣ‌ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.