ADVERTISEMENT

"ವಿರೋಧ ಪಕ್ಷದ ನಾಯಕತ್ವದಿಂದ ತೆಗೆದರೆ ಸಿದ್ದರಾಮಯ್ಯ ಕಾಂಗ್ರೆಸ್‌ ಬಿಡ್ತಾರೆ"

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯರ ಕಾಲೆಳೆದ ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 13:54 IST
Last Updated 30 ಅಕ್ಟೋಬರ್ 2019, 13:54 IST
ಕೆ.ಎಸ್. ಈಶ್ವರಪ್ಪ‌
ಕೆ.ಎಸ್. ಈಶ್ವರಪ್ಪ‌   

ದಾವಣಗೆರೆ: ಪಕ್ಷದೊಳಗಿನ ಗುಂಪುಗಾರಿಕೆಯಿಂದ ವಿರೋಧ ಪಕ್ಷದ ನಾಯಕತ್ವವನ್ನು ಕಳೆದುಕೊಂಡ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್‌ ಬಿಟ್ಟು ಹೋಗಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅಭಿಪ್ರಾಯಪಟ್ಟರು.

‘ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧಪಕ್ಷದಲ್ಲಿರುತ್ತಾರೆ’ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಈಶ್ವರಪ್ಪ ಬುಧವಾರ ಇಲ್ಲಿ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಎಲ್ಲಿರುತ್ತಾರೆ? ಈಗಾಗಲೇ ಒಳಜಗಳ ಆರಂಭವಾಗಿದೆ. ವಿರೋಧಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಕಿತ್ತು ಬೇರೆಯವರನ್ನು ಮಾಡುತ್ತಾರೆ. ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧ ಪಕ್ಷದ ನಾಯಕರಾಗಿರುತ್ತಾರೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಯೇ ಸುಳ್ಳು. ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕರಾಗುವ ಯೋಗ್ಯತೆಇಲ್ಲ’ ಎಂದು ಟೀಕಿಸಿದರು.

ADVERTISEMENT

‘ಅಧಿಕಾರ ಇದ್ದರೆ ಪಕ್ಷದಲ್ಲಿ ಇರುತ್ತಾರೆ; ಅಧಿಕಾರ ಇಲ್ಲದಿದ್ದರೆ ಆ ಪಕ್ಷವನ್ನು ಒದ್ದು ಬೇರೆ ಕಡೆಗೆ ಹೋಗುತ್ತಾರೆ. ಇದು ಸಿದ್ದರಾಮಯ್ಯ ಅವರ ಸ್ವಭಾವ’ ಎಂದು ಈಶ್ವರಪ್ಪ ಕುಟುಕಿದರು.

‘ಬಿಜೆಪಿ ಸರ್ಕಾರ ಬೀಳುವುದಿಲ್ಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದರೆ, ಕುಮಾರಸ್ವಾಮಿ ಬೆಂಬಲ ಇಲ್ಲದೇ ಬಿಜೆಪಿ ಪೂರ್ಣಾವಧಿ ಮುಗಿಸಲಿದೆ. ಉಪ ಚುನಾವಣೆ ನಡೆದರೆ ಅದರಲ್ಲೂ ನಾವು ಅತಿ ಹೆಚ್ಚು ಸ್ಥಾನ ಪಡೆದು ಬಹುಮತ ಗಳಿಸುತ್ತೇವೆ. ಕುಮಾರಸ್ವಾಮಿ ಅವರು ನಮ್ಮ ಮೇಲಿನ ವಿಶ್ವಾಸ–ಪ್ರೀತಿಯಿಂದ ಆ ರೀತಿ ಹೇಳಿಕೆ ನೀಡಿದ್ದು, ಅದನ್ನು ತಿರಸ್ಕರಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.