ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸರಳೀಕೃತ ಜಿಎಸ್‌ಟಿ 2.0 ವ್ಯವಸ್ಥೆ ಜಾರಿ ಮಾಡಿರುವುದನ್ನು ಸಂಭ್ರಮಿಸಿ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸೋಮವಾರ ರಾಜ್ಯದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿದರು.
ತೆರಿಗೆ ಇಳಿಸಲು ಕಾರಣರಾದ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ನಾಯಕರು ಅಭಿನಂದಿಸಿದರು.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಸಂಸದ ಪಿ.ಸಿ.ಮೋಹನ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ನಂತರ ಮಳಿಗೆಗಳಿಗೆ ತೆರಳಿ ಸಿಹಿ ವಿತರಿಸಿದರು. ಬಿಜೆಪಿಯ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಮತ್ತು ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಕ್ಷದ ಕೇಂದ್ರ ಕಚೇರಿ ಮುಂಭಾಗದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿರೋಧಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಇತರರು ಭಾಗವಹಿಸಿದ್ದರು. ಇವರು ಮಲ್ಲೇಶ್ವರದ ಅಂಗಡಿ–ಮಳಿಗೆಗಳಿಗೆ ತೆರಳಿ ಸಿಹಿ ವಿತರಿಸಿದರು.
ಮಂಡ್ಯದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಕಾಮನಗುಡಿ ಸರ್ಕಲ್, ಪೇಟೆ ಬೀದಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಮ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಸ್ವಾಮಿಗೌಡ, ಜಿಲ್ಲಾ ವಕ್ತಾರ ಸಿ.ಟಿ ಮಂಜುನಾಥ್ ಹಾಗೂ ಕಾರ್ಯಕರ್ತರು ಇದ್ದರು.
ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಸರಳೀಕರಿಸಿ ಜನರಿಗೆ ದಸರಾ ಮತ್ತು ದೀಪಾವಳಿ ಉಡುಗೊರೆ ನೀಡಿದ್ದಾರೆ. ಇದಕ್ಕಾಗಿ ರಾಜ್ಯದ ಜನತೆ ಪರವಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಲು ಸಂಭ್ರಮಾಚರಣೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.
‘ಪ್ರಧಾನಿ ಮೋದಿ ಜಿಎಸ್‌ಟಿ ತೆರಿಗೆ ಇಳಿಸಿ ಜನಸಾಮಾನ್ಯರಿಗೆ ಹಬ್ಬದ ಉಡುಗೊರೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ತೆರಿಗೆ ಇಳಿಸುವುದು ಯಾವಾಗ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಈ ಕುರಿತು ‘ಎಕ್ಸ್’ ಮಾಡಿರುವ ಅವರು ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಎರಡು ವರ್ಷದಲ್ಲಿ ತೆರಿಗೆ ಹೆಸರಿನಲ್ಲಿ ರಾಜ್ಯದ ಜನರಿಂದ ₹1ಲಕ್ಷ ಕೋಟಿ ವಸೂಲು ಮಾಡಿದೆ. ಅಧಿಕಾರಕ್ಕೆ ಬಂದ ತಕ್ಷಣ ಪೆಟ್ರೋಲ್ ಮೋಟಾರು ವಾಹನ ತೆರಿಗೆ ಸ್ಟ್ಯಾಂಪ್ ಡ್ಯೂಟಿ ಅಬಕಾರಿ ತೆರಿಗೆ ಹಾಲು ನೀರು ವಿದ್ಯುತ್ ಹೀಗೆ ಎಲ್ಲದರ ಮೇಲೂ ತೆರಿಗೆ ಹೆಚ್ಚಿಸಿರುವುದರಿಂದ ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳು ದುಬಾರಿ ಆಗಿವೆ’ ಎಂದು ಹೇಳಿದ್ದಾರೆ. ಇವರು ನೀರಿನ ಮೇಲೂ ಗಾಳಿಯ ಮೇಲೂ ತೆರಿಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಕಸದ ಮೇಲೂ ವಿಶೇಷ ತೆರಿಗೆ ಹಾಕಿದ್ದಾರೆ. ಇದೊಂದು ತೆರಿಗೆ ಭಾರ ಹಾಕಿರುವ ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.