
ಬೆಂಗಳೂರು: ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಿಂಗಪುರ ಹೆಚ್ಚು ಉತ್ಸುಕವಾಗಿದೆ. ಆ ದೇಶದ ಜತೆ ತಂತ್ರಜ್ಞಾನ ಹಂಚಿಕೊಳ್ಳುವ ಮತ್ತು ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಕುರಿತು ಸಿಂಗಪುರದ ವಿದೇಶಾಂಗ ಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಿಂಗಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್ ಶಿಯೋ ಹುಯಂಗ್ ಅವರ ನೇತೃತ್ವದ ನಿಯೋಗದ ಜತೆ ಬುಧವಾರ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಸಿಂಗಪುರದ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ಗುರುವಾರ ಕಾರ್ಯಾರಂಭ ಮಾಡಲಿದೆ. ಅವರು ಒಪ್ಪಿದರೆ ಒಂದು ಬಹುಮಹಡಿ ಕಟ್ಟಡ ನಿರ್ಮಿಸಿ ಅವರ ಎಲ್ಲಾ ಕಚೇರಿಗಳು ಒಂದೇ ಕಡೆ ಇರುವಂತೆ ಮಾಡಲು ಪ್ರಸ್ತಾವ ನೀಡಿದ್ದೇನೆ. ಈ ವಿಚಾರವನ್ನು ಇತರ ದೇಶದವರ ಜತೆಗೂ ಮಾತನಾಡಿದ್ದೇನೆ. ಭದ್ರತಾ ಉದ್ದೇಶದಿಂದ ಕೆಲವರು ಒಪ್ಪಿರಲಿಲ್ಲ’ ಎಂದು ತಿಳಿಸಿದರು.
ಹಲವು ದೇಶಗಳ ಜನ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ಹೀಗಾಗಿ ಸಿಂಗಪುರ ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ ಎಂದರು.
2026ರಲ್ಲಿ ಸಿಂಗಪುರಕ್ಕೆ: ಎಂ.ಬಿ.ಪಾಟೀಲ
‘ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರಲ್ಲಿ ಸಿಂಗಪುರಕ್ಕೆ ಭೇಟಿ ನೀಡಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಗಾನ್ ಶಿಯೋ ಹುಯಂಗ್ ಜತೆ ಮಾತುಕತೆ ಬಳಿಕ ತಿಳಿಸಿದರು.
ಸಿಂಗಪುರ ಭೇಟಿಗೂ ಮುನ್ನ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಲಾಗುವುದು. ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್, ಫಿನ್-ಟೆಕ್, ಚಿಪ್ ವಿನ್ಯಾಸ, ಔಷಧ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.