ಸಿದ್ದರಾಮಯ್ಯ
ಮೈಸೂರು: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಆರೋಪಗಳ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಪೊಲೀಸ್ ಇಲಾಖೆಯವರು ಹೇಳಿದರೆ ಮಾಡುತ್ತೇವೆ. ಈ ಪ್ರಕರಣದಲ್ಲಿ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ. ಯಾರೇ ಒತ್ತಡ ಹಾಕಿದರೂ, ಯಾರ ಮಾತುಗಳನ್ನೂ ನಾವು ಕೇಳುವುದಿಲ್ಲ. ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆರೋಪಗಳ ಕುರಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ನೀಡಿರುವ ಹೇಳಿಕೆಗೆ ನಾವು ಪರವೂ ಇಲ್ಲ, ವಿರೋಧವೂ ಇಲ್ಲ. ಪೊಲೀಸ್ ಇಲಾಖೆಯವರು ಸಲ್ಲಿಸುವ ವರದಿಯ ಆಧಾರದ ಮೇಲೆ, ಎಸ್‌ಐಟಿ ಮಾಡಬೇಕೆಂಬ ಶಿಫಾರಸು ಬಂದರೆ ರಚಿಸುತ್ತೇವೆ. ಶನಿವಾರದೊಳಗೆ ಎಲ್ಲವೂ ಗೊತ್ತಾಗಲಿದೆ’ ಎಂದರು.
‘ದೂರುದಾರ 10 ವರ್ಷ ತಲೆಮರೆಸಿಕೊಂಡಿದ್ದ. ಆತ, ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನೆ. ನಾನೇ ಹೂತು ಹಾಕಿದ್ದೇನೆ ಎಂದೆಲ್ಲಾ ಹೇಳಿದ್ದಾನೆ. ಆ ಜಾಗಕ್ಕೆ ಕರೆದುಕೊಂಡು ಹೋದರೆ ಹೆಣಗಳನ್ನು ತೋರಿಸುತ್ತೇನೆ ಎಂದೂ ಹೇಳಿದ್ದಾನೆ. ಪೊಲೀಸರು ಏನು ಹೇಳುತ್ತಾರೆಯೋ ನೋಡೋಣ’ ಎಂದು ಹೇಳಿದರು.
‘ಈ ಪ್ರಕರಣದಲ್ಲಿ ತನಿಖೆ ಸರಿಯಾಗಿ ಆಗುತ್ತಿಲ್ಲ’ ಎಂಬ ಗೋಪಾಲಗೌಡ ಅವರ ಹೇಳಿಕಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕಾನೂನು ರೀತಿ ಮಾಡಬೇಕಲ್ಲವೇ? ಕಾನೂನು ಬಿಟ್ಟು ಮಾಡಕ್ಕಾಗುತ್ತಾ? ಎತ್ತು ಈಯ್ತು ಅಂದ್ರೆ ಕೊಟ್ಟಿಗೆಗ್ ಕಟ್ಟು ಅನ್ನೋದಾ? ಎತ್ತು ಕರು ಹಾಕುವುದಿಲ್ಲ. ಕೊಟ್ಟಿಗೆಗೆ ಕಟ್ಟಿ ಅಂದ್ರೆ ಕಟ್ಟಿಬಿಡೋದಾ? ಎಲ್ಲವನ್ನೂ ಕಾನೂನು ರೀತಿ ಮಾಡುತ್ತೇವೆ’ ಎಂದು ಹೇಳಿದರು.
‘ದಲಿತರಿಗೆ ಸ್ಥಾನ ಬಿಟ್ಟುಕೊಡಲಿ ಎಂದು ಹೇಳುತ್ತಿರುವ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ಬಿಟ್ಡು ಕೊಡಲಿ, ನರೇಂದ್ರ ಮೋದಿ ಪ್ರಧಾನಿ ಸ್ಥಾನವನ್ನು ನೀಡಲಿ. ನಮ್ಮಲ್ಲಿ ಎಲ್ಲರೂ ಆಗಿದ್ದಾರೆ. ಕಾಂಗ್ರೆಸ್ ಮಾತ್ರ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆಯೇ ಹೊರತು ಬಿಜೆಪಿಯಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಮೈಸೂರಿನ ಜುಲೈ 19ರಂದು (ಶನಿವಾರ) ನಡೆಸಲಾಗುತ್ತಿರುವ ಸಮಾವೇಶ ಯಾರ ಶಕ್ತಿ ಪ್ರದರ್ಶನವೂ ಅಲ್ಲ. ಪಕ್ಷ ಹಾಗೂ ಸರ್ಕಾರ ಮಾಡಿರುವ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನವಿದು. ಈ ಸರ್ಕಾರ ಏನೂ ಮಾಡುತ್ತಿಲ್ಲ, ಗ್ಯಾರಂಟಿ ಯೋಜನೆಗಳ ದುಡ್ಡಿಲ್ಲ ಎಂದೆಲ್ಲಾ ಬಿಜೆಪಿಯವರು ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ವಾಸ್ತವ ಸ್ಥಿತಿ ತಿಳಿಸಲು ಸಮಾವೇಶ ನಡೆಸುತ್ತಿದ್ದೇವೆ. ದುಡ್ಡಿಲ್ಲದೇ ಹೋಗಿದ್ದರೆ ಮೈಸೂರೊಂದರಲ್ಲೇ ₹ 2,600 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿತ್ತಾ?’ ಎಂದು ಕೇಳಿದರು.
‘ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ನಾನೇನೂ ಹೇಳಿಲ್ಲ. ಯಾರು ಹೇಳಿದ್ದಾರೆಯೋ ಅವರನ್ನೇ ಕೇಳಿ’ ಎಂದು ಪ್ರತಿಕ್ರಿಯಿಸಿದರು.
‘ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡಿರುವುದು ಗಮನಕ್ಕೆ ಬಂದಿದೆ. ಇಂಥದ್ದನ್ನು ತಡೆಯಲು ಕಾನೂನು ತರುತ್ತಿದ್ದೇವೆ. ಸುಳ್ಳು ಮಾಹಿತಿ ಕೊಡುವುದು, ಸುಳ್ಳು ಹೇಳುವುದು, ಪ್ರಚೋದನೆ ನೀಡುವುದು ತಡೆಯಲೆಂದು ಕಾನೂನು ತರಲಿದ್ದೇವೆ’ ಎಂದು ತಿಳಿಸಿದರು.
‘ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ (ಬ್ರಿಜೇಶ್ ಕುಮಾರ್ ಆಯೋಗ) ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ನಮ್ಮದೇನೂ ವಿರೋಧವಿಲ್ಲ. ಆದರೆ, ಕೇಂದ್ರ ಇಂದಿನವರೆಗೂ ಗೆಜೆಟ್ ನೋಟಿಫಿಕೇಷನ್ (ಅಧಿಸೂಚನೆ) ಮಾಡಿಲ್ಲ. ನ್ಯಾಯಮಂಡಳಿ ತೀರ್ಪು ನೀಡಿ ಸುಮಾರು ವರ್ಷಗಳಾದರೂ ಅಧಿಸೂಚನೆ ಹೊರಡಿಸಿಲ್ಲ. ಪ್ರಶ್ನೆ ಇರುವುದು, ಇದು ಆಂಧ್ರ–ತೆಲಂಗಾಣ ರಾಜ್ಯಗಳ ನಡುವಿನ ವಿವಾದವದು, ನಮಗೇನೂ ಅಷ್ಟೊಂದು ಸಂಬಂಧಿಸಿದಲ್ಲ. ನಮಗೆ ಕೊಟ್ಟಿರುವ ತೀರ್ಪಿನ ಅಧಿಸೂಚನೆ ಹೊರಡಿಸುವುದಕ್ಕೆ ಯಾವುದೇ ಅಡೆತಡೆ ಇಲ್ಲ. ಆದರೆ, ಮಾಡುತ್ತಿಲ್ಲ. ನಾವು ಅನೇಕ ಬಾರಿ ಭೇಟಿಯಾಗಿ ಹೇಳಿದ್ದರೂ ಆಗಿಲ್ಲ’ ಎಂದು ದೂರಿದರು.
‘ಅವಧಿ ವಿಸ್ತರಣೆಯಿಂದ, ನಾವು ಕೊಡಬೇಕಾದ ನೀರಿನ ಪಾಲಿನ ಪ್ರಮಾಣ ಜಾಸ್ತಿಯೇನೂ ಆಗುವುದಿಲ್ಲ. ಏಕೆಂದರೆ 519 ಅಡಿಗಳಿಂದ 524.262 ಅಡಿವರೆಗೆ ಮಟ್ಟವನ್ನು ಎತ್ತರಿಸಲು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.
‘ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನಿಖೆಗೆ ನೇಮಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ಏಕಸಮಿತಿ ವಿಚಾರಣಾ ಆಯೋಗವು ಗುರುವಾರ ವರದಿ ಕೊಟ್ಟಿದೆ. ಅದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ್ದೇವೆ. ಅದರ ಬಗ್ಗೆ ಚರ್ಚೆಯಾಗಿಲ್ಲ. ಎಲ್ಲ ಸಚಿವರಿಗೂ ಪ್ರಮುಖಾಂಶಗಳ ಪ್ರತಿಯನ್ನು ಕೊಟ್ಟಿದ್ದೇವೆ. ಓದಿಕೊಂಡು ಬನ್ನಿ ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಹೇಳಿದ್ದೇವೆ’ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಡಿ.ರವಿಶಂಕರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.