ADVERTISEMENT

ಎಸ್‌ಐಟಿ ತಪ್ಪು ಎನ್ನುವುದಾದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿತ್ತು: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 14:31 IST
Last Updated 29 ಆಗಸ್ಟ್ 2025, 14:31 IST
   

ಬೆಂಗಳೂರು: ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯೇ ತಪ್ಪು ಎನ್ನುವುದಾದರೆ ಅದನ್ನು ನ್ಯಾಯಾಲಯದಲ್ಲೇ ಪ್ರಶ್ನಿಸಬೇಕಿತ್ತು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ರಚಿಸಲಾಗಿದೆ. ರಾಜ್ಯ ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಬೇರೆ ವಿಚಾರಗಳಿಲ್ಲ. ಆದ್ದರಿಂದ ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

‘ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕೆ ಮಾಡುತ್ತಿದ್ದರು. ಅದನ್ನು ಯಾರೂ ಕೇಳಲಿಲ್ಲ. ಇತರ ವಿಷಯಗಳಲ್ಲೂ ಅಪಪ್ರಚಾರ ನಡೆಸಿದರು. ಯಾವುದೇ ಪ್ರಯೋಜನ ಆಗಲ್ಲಿಲ್ಲ. ಈಗ ಧರ್ಮಸ್ಥಳದ ವಿಚಾರವನ್ನು ಹಿಡಿದುಕೊಂಡಿದ್ದಾರೆ. ನಮ್ಮ ಪಕ್ಷದ ಪಾತ್ರ ಏನೂ ಇಲ್ಲ. ಸರ್ಕಾರಕ್ಕೆ ಇದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ದೂರು ಬಂದ ಕಾರಣ ನ್ಯಾಯಾಲಯ ಆದೇಶ ನೀಡಿತ್ತು. ಅದರ ಅನ್ವಯ ಎಸ್ಐಟಿ ತನಿಖೆ ನಡೆದಿದೆ. ಬಿಜೆಪಿಯವರು ಈಗ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸತೀಶ ಹೇಳಿದರು.

ADVERTISEMENT

ಬಿಜೆಪಿ ವಿರೋಧ ಏಕೆ: ಲಾಡ್‌ ಪ್ರಶ್ನೆ

‘ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿದ್ದನ್ನು ಬಿಜೆಪಿ ಆರಂಭದಲ್ಲಿ ಸ್ವಾಗತಿಸಿತ್ತು. ಈಗ ವಿರೋಧ ಮಾಡುತ್ತಿರುವುದು ಏಕೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೊದಲಿಗೆ ಎಸ್‌ಐಟಿ ತನಿಖೆ ಸ್ವಾಗತಿಸಿದ್ದಾದರೂ ಏಕೆ? ಈಗ ಇವರು ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಧರ್ಮಸ್ಥಳದ ಪ್ರಕರಣ ಅಂತರರಾಷ್ಟ್ರೀಯ ವಿಷಯವಾಗಿದೆ. ಎಸ್‌ಐಟಿಯಿಂದ ಸತ್ಯಾಂಶ ಹೊರಗೆ ಬರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.