ADVERTISEMENT

ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋದ ಆರು ಸಚಿವರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:35 IST
Last Updated 6 ಮಾರ್ಚ್ 2021, 3:35 IST
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್   

ಬೆಂಗಳೂರು: ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಆರು ಸಚಿವರು ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕ್ರೀಡೆ ಮತ್ತು ಯುವಜನ ಸಬಲೀಕರಣ, ಸಾಂಖ್ಯಿಕ ಮತ್ತು ಯೋಜನೆ ಸಚಿವ ಕೆ.ಸಿ. ನಾರಾಯಣಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಚನ್ನಬಸಪ್ಪ ಎಂಬ ವಕೀಲರ ಮೂಲಕ ಅರ್ಜಿ ಸಲ್ಲಿಸಿ ದ್ದಾರೆ. ಶನಿವಾರ ವಿಚಾರಣೆಗೆ ಬರಲಿದೆ.

ಸರ್ಕಾರಿ ನೌಕರಿ ಕೊಡುವ ಆಮಿಷ ಒಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಿಲುಕಿರುವ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ಮಾನಹಾನಿಕರ ಸುದ್ದಿ ಪ್ರಸಾರದ ಭೀತಿಯಿಂದ ಮತ್ತು ಅಂಥ ಸುದ್ದಿ ಪ್ರಸಾರವಾಗುವ ಮೊದಲೇ ನ್ಯಾಯಾಲಯದ ಮೂಲಕ ನಿರ್ಬಂಧ ವಿಧಿಸಲು ಸಚಿವರು ಮುಂದಾಗಿದ್ದಾರೆ ಎನ್ನಲಾಗಿದೆ.

67 ಸುದ್ದಿ ಸಂಸ್ಥೆಗಳನ್ನು ಪ್ರತಿವಾದಿ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರನ್ನು 68ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಇನ್ನೂ 19 ರಾಜಕಾರಣಿಗಳ ಸಿ.ಡಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಮುಲಾಲಿ ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಪ್ರತಿವಾದಿಗಳ ಪಟ್ಟಿಯಲ್ಲಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ವಾಟ್ಸ್‌ಆ್ಯಪ್ ಕೂಡ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.