
ಬೆಂಗಳೂರು: ‘ರಾಜ್ಯದಲ್ಲಿ ಕೌಶಲ ತರಬೇತಿ ಕೇಂದ್ರ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಲು ಇಚ್ಛಿಸುವವರಿಗೆ ರಾಜ್ಯ ಸರ್ಕಾರದಿಂದಲೇ ಅಗತ್ಯ ಜಮೀನು ಮಂಜೂರು ಮಾಡಲಾಗುವುದು’ ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟವು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಕೌಶಲ ಶೃಂಗಸಭೆ–2025’ಯಲ್ಲಿ ಅವರು ಮಾತನಾಡಿದರು.
‘ಪದವಿ, ವೃತ್ತಿಪರ ಕೋರ್ಸ್‌ಗಳನ್ನು ಮಾಡಿದ ವಿದ್ಯಾರ್ಥಿಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಉದ್ಯಮಗಳ ಸಹಯೋಗದಲ್ಲೇ ತರಬೇತಿ ಕೇಂದ್ರ ಅಥವಾ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಿದೆ. ಇದಕ್ಕೆ ಸರ್ಕಾರವು ಅಗತ್ಯ ನೆರವುಗಳನ್ನು ನೀಡಲಿದೆ’ ಎಂದರು.
‘ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬಜಾಜ್ ಕಂಪನಿಯು ಎಂಜಿನಿಯರಿಂಗ್ ಕೌಶಲ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಖಾಸಗಿ–ಸರ್ಕಾರಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕಾಟ್ರಾನಿಕ್ಸ್, ರೊಬೊಟಿಕ್ಸ್ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯದ ಹಲವೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶಗಳಿವೆ’ ಎಂದು ಹೇಳಿದರು.
‘ಶೈಕ್ಷಣಿಕ ಕಲಿಕೆ ಮತ್ತು ಪ್ರಾಯೋಗಿಕ ತರಬೇತಿ ಎರಡಕ್ಕೂ ಅವಕಾಶವಿರುವ ‘ಡ್ಯುಯಲ್ ಅಪ್ರೆಂಟಿಸ್‌ಶಿಪ್’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಉದ್ಯಮರಂಗದ ಸಹಕಾರ ಅಗತ್ಯ. ಶಿಕ್ಷಣ–ಉದ್ಯಮ ಸಹಯೋಗವನ್ನು ಹೊಸ ಎತ್ತರಕ್ಕೆ ಒಯ್ಯೋಣ’ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.