ADVERTISEMENT

ಕಾಶ್ಮೀರ ಸಮಸ್ಯೆಗೆ ನೆಹರೂ ಕಾರಣ: ಎಸ್‌.ಎಲ್‌. ಭೈರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 17:00 IST
Last Updated 7 ಜನವರಿ 2021, 17:00 IST
ಎಸ್.ಎಲ್.ಭೈರಪ್ಪ
ಎಸ್.ಎಲ್.ಭೈರಪ್ಪ   

ಬೆಂಗಳೂರು: ಕಾಶ್ಮೀರ ಎದುರಿಸುತ್ತಿರುವ ಸಮಸ್ಯೆಗೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಕಾರಣ. ಅವರು ಮಾಡಿದ ತಪ್ಪುಗಳಿಂದಾಗಿ ಕಾಶ್ಮೀರದ ಜನರು ಯಾತನೆ ಅನುಭವಿಸುತ್ತಿದ್ದಾರೆ ಎಂದು ಸಾಹಿತಿ ಡಾ.ಎಸ್.ಎಲ್‌. ಭೈರಪ್ಪ ಆರೋಪಿಸಿದರು.

ಗುರುವಾರ ವರ್ಚ್ಯುವಲ್‌ ಮೂಲಕ ನಡೆದ ಸಹನಾ ವಿಜಯಕುಮಾರ್‌ ಅವರ ‘ಕಶೀರ’ ಕಾದಂಬರಿಯ ಇಂಗ್ಲಿಷ್‌ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೌಂಟ್‌ ಬ್ಯಾಟನ್‌ ಮತ್ತು ಅವರ ಪತ್ನಿಯ ಪ್ರಭಾವಕ್ಕೆ ಒಳಗಾಗಿ ನಿರ್ಣಯ ಕೈಗೊಳ್ಳುತ್ತಿದ್ದ ನೆಹರೂ, ಕಾಶ್ಮೀರ ಸ್ವತಂತ್ರವಾಗದಂತೆ ತಡೆದರು. ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಮುಂದೆ ತೆಗೆದುಕೊಂಡು ಹೋಗುವ ವಿಚಾರದಲ್ಲೂ ಪ್ರಭಾವಕ್ಕೆ ಒಳಗಾಗಿದ್ದರು’ ಎಂದು ದೂರಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸೇರಲು ಭಾರತಕ್ಕೆ ಅವಕಾಶವಿತ್ತು. ಆದರೆ, ನೆಹರೂ ಚೀನಾ ರಾಷ್ಟ್ರವನ್ನು ಭದ್ರತಾ ಮಂಡಳಿಗೆ ಸೇರಿಸಲು ಲಾಬಿ ನಡೆಸಿದರು. ಈಗ ಅದೇ ರಾಷ್ಟ್ರ ಭಾರತಕ್ಕೆ ಭದ್ರತಾ ಮಂಡಳಿಯ ಸದಸ್ಯತ್ವ ದೊರಕದಂತೆ ತಡೆಯುತ್ತಿದೆ. ನೆಹರೂ ರಷ್ಯಾ ದೇಶವನ್ನು ಅನುಕರಿಸಿದ್ದೇ ಈಗ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಮೂಲ ಕಾರಣ ಎಂದರು.

ADVERTISEMENT

ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಜಾರಿ ಸೇರಿದಂತೆ ಕಾಶ್ಮೀರದ ವಿಚಾರದಲ್ಲಿ ನೆಹರೂ ಯಾವ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಈಗ ಅವರ ಪಕ್ಷ (ಕಾಂಗ್ರೆಸ್‌) ಕೂಡ ಅದೇ ನಿಲುವನ್ನು ಹೊಂದಿದೆ. ವಿರೋಧ ಪಕ್ಷ ಎಂದರೆ ಎಲ್ಲವನ್ನೂ ವಿರೋಧಿಸಬೇಕೆಂಬ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ ಗಾಂಧೀಜಿಯವರು ನೆಹರೂ ಪರವಾದ ಒಲವು ತೋರಿದ್ದರು. ದೇಶದ ನಾಯಕತ್ವನ್ನು ಇನ್ನೂ ಉತ್ತಮವಾದವರ ಕೈಗೆ ನೀಡುವ ಅವಕಾಶ ತಪ್ಪಿಸಿದರು. ನೆಹರೂ ಸ್ವತಂತ್ರ ಚಿಂತನೆಯುಳ್ಳ ವ್ಯಕ್ತಿಯಾಗಿರಲಿಲ್ಲ. ಅವರ ಬರಹ ಮತ್ತು ಚಿಂತನೆಗಳಲ್ಲಿ ಸ್ವತಂತ್ರವಾದುದು ಏನೂ ಇರಲಿಲ್ಲ ಎಂದು ಭೈರಪ್ಪ ಹೇಳಿದರು.

ಲೇಖಕಿ ಸಹನಾ ವಿಜಯಕುಮಾರ್‌, ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ಹೇಮಂತ್‌ ಶಾಂತಿಗ್ರಾಮ, ಜಮ್ಮು– ಕಾಶ್ಮೀರ ಜಾಗತಿಕ ಮಂಚ್‌ನ ದಕ್ಷಿಣ ಭಾರತ ವಿಭಾಗದ ಸಂಚಾಲಕ ದಿಲೀಪ್‌ ಕಾಚ್ರೂ ಮತ್ತು ಗರುಡ ಪ್ರಕಾಶನದ ಸಂಸ್ಥಾಪಕ ಸಂಕ್ರಾಂತ್‌ ಸಾನು ವರ್ಚ್ಯುಯಲ್‌ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.