ಮದ್ದೂರು ತಾಲ್ಲೂಕು ಸೋಮನಹಳ್ಳಿ ಸಮೀಪದ ‘ಕೆಫೆ ಕಾಫಿ ಡೇ’ ಆವರಣದಲ್ಲಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ವೇಳೆ ಪತ್ನಿ ಪ್ರೇಮಾ ಅವರು ಪತಿಯ ಬಾಯಿಗೆ ಚಿನ್ನದ ನಾಣ್ಯವಿಟ್ಟು ನಮಿಸಿದರು.
ಸೋಮನಹಳ್ಳಿ (ಮಂಡ್ಯ ಜಿಲ್ಲೆ): ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಮದ್ದೂರು ತಾಲ್ಲೂಕಿನ ಸ್ವಗ್ರಾಮ ಸೋಮನಹಳ್ಳಿಯ ಹೊರವಲಯದಲ್ಲಿ ಬುಧವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದರೊಂದಿಗೆ, ಕರ್ನಾಟಕದ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ, ರಾಷ್ಟ್ರ ರಾಜಕಾರಣಕ್ಕೂ ಕೊಡುಗೆ ನೀಡಿದ್ದ ಸುದೀರ್ಘ ಅಧ್ಯಾಯವೊಂದು ಕೊನೆಗೊಂಡಿತು.
ಕೃಷ್ಣ ಅವರ ಪ್ರೀತಿಯ ತಾಣವಾದ ‘ಕೆಫೆ ಕಾಫಿ ಡೇ’ ಆವರಣದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅಪಾರ ಜನರ ಅಶ್ರುತರ್ಪಣದ ನಡುವೆ, ಸಂಜೆ 5.33ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಮೊಮ್ಮಗ ಅಮರ್ತ್ಯ ಹೆಗ್ಡೆ ಚಿತೆಗೆ ಸಂಜೆ 5.23ಕ್ಕೆ ಅಗ್ನಿಸ್ಪರ್ಶ ಮಾಡಿದರು. ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನ ಸದಾಶಿವನಗರ ಮನೆಯಿಂದ ಬೆಳಿಗ್ಗೆ ಆರಂಭವಾದ ಪಾರ್ಥಿವ ಶರೀರದ ಮೆರವಣಿಗೆಯು ರಾಮನಗರ, ಚನ್ನಪಟ್ಟಣ ಮುಖಾಂತರ ಮಧ್ಯಾಹ್ನ 2ರ ಸುಮಾರಿಗೆ ಸೋಮನಹಳ್ಳಿ ತಲುಪಿತು. ಮಧ್ಯಾಹ್ನ 3.15ರವರೆಗೆ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.
ಸೋಮನಹಳ್ಳಿ, ನಿಡಘಟ್ಟ, ಕೆಸ್ತೂರು ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳು ಮತ್ತು ನೆರೆಯ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಊರಿನ ಮಗನನ್ನು ಕೊನೆಯದಾಗಿ ನೋಡಿ, ನಮಿಸಿದರು.
ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಕುಟುಂಬಸ್ಥರು ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ನಂತರ, ಪೊಲೀಸರು ಮೂರು ಸುತ್ತು ತೋಪು ಸಿಡಿಸಿ, ಗೌರವ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ಗೌರವ ವಂದನೆ ಸಲ್ಲಿಸಿತು.
ಬಳಿಕ, ಕೃಷ್ಣ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಪತ್ನಿ ಪ್ರೇಮಾ ಅವರಿಗೆ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಹಸ್ತಾಂತರಿಸಿದರು.
ಕೊನೆಯ ಬಾರಿಗೆ ಕೃಷ್ಣ ಅವರಿಗೆ ಆರತಿ ಬೆಳಗಿ, ಮುಖವನ್ನು ನೋಡಿ ಕಣ್ತುಂಬಿಕೊಂಡ ಪತ್ನಿ ಪ್ರೇಮಾ ಮತ್ತು ಮಕ್ಕಳಾದ ಮಾಳವಿಕಾ, ಶಾಂಭವಿ ಭಾವುಕರಾದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಗಂಧದ ಚಕ್ಕೆ ಇಟ್ಟು ಅಂತಿಮ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುಷ್ಪನಮನ ಸಲ್ಲಿಸಿದರು. ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು, ಸಚಿವರಾದ ಎಚ್.ಕೆ.ಪಾಟೀಲ, ಎಂ.ಸಿ.ಸುಧಾಕರ್, ಎನ್.ಚಲುವರಾಯಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಆರ್.ಬಿ.ತಿಮ್ಮಾಪುರ, ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ.ಕೆ.ಸುಧಾಕರ್, ಶಾಸಕರಾದ ಟಿ.ಬಿ.ಜಯಚಂದ್ರ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ, ಎನ್.ಎ.ಹ್ಯಾರಿಸ್, ಸಿ.ಪಿ.ಯೋಗೇಶ್ವರ್, ಪಿ.ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ರಂಗನಾಥ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಎ.ಎಚ್.ವಿಶ್ವನಾಥ್, ಮಾಜಿ ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಪಾಲ್ಗೊಂಡಿದ್ದರು.
ಬಿಕ್ಕಿ ಬಿಕ್ಕಿ ಅತ್ತ ಡಿ.ಕೆ. ಶಿವಕುಮಾರ್
ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸುವ ವೇಳೆ ಡಿಸಿಎಂ ಮತ್ತು ಸಂಬಂಧಿಯೂ ಆದ ಡಿ.ಕೆ. ಶಿವಕುಮಾರ್ ಬಿಕ್ಕಿ ಬಿಕ್ಕಿ ಅತ್ತರು. ಚಟ್ಟಕ್ಕೆ ಹೆಗಲು ಕೊಟ್ಟು ನಡೆದ ಅವರು ನಂತರ ಚಿತೆಯ ಮೇಲೆ ಶ್ರೀಗಂಧದ ತುಂಡುಗಳನ್ನಿಟ್ಟು ನಮಿಸಿ ಭಾವುಕರಾದರು. ಅಗ್ನಿಸ್ಪರ್ಶ ಮಾಡಲು ಸಮಯ ಮೀರುತ್ತಿದ್ದುದರಿಂದ ಪ್ರಧಾನ ವೈದಿಕ ಭಾನುಪ್ರಕಾಶ್ ಹೊರತುಪಡಿಸಿ ಚಿತೆ ಕಟ್ಟೆಯ ಮೇಲೆ ನಿಂತಿದ್ದ ಸಂಬಂಧಿಕರು ಮತ್ತು ಪುರೋಹಿತರು ಕೂಡಲೇ ಕೆಳಗಿಳಿಯುವಂತೆ ತಾಕೀತು ಮಾಡಿದರು. ಇನ್ನೂ ಕೆಲವು ಪುರೋಹಿತರು ಅಲ್ಲೇ ನಿಂತಿದ್ದನ್ನು ಕಂಡು ‘ಎಲ್ಲ ವಿಧಿವಿಧಾನ ನನಗೆ ಗೊತ್ತಿದೆ ಕಟ್ಟೆಯಿಂದ ಕೆಳಗಿಳಿಯಿರಿ‘ ಎಂದು ಗರಂ ಆದರು. ತಾವೇ ಮೈಕ್ ಹಿಡಿದು ಸೂಚನೆ ಕೊಡುತ್ತಾ ಆರಂಭದಿಂದ ಕೊನೆಯವರೆಗೆ ಜನರನ್ನು ನಿಯಂತ್ರಿಸಿದರು. ಜನ ಗದ್ದಲ ಮಾಡಿದಾಗ ಗದರಿ ನಿಯಂತ್ರಿಸಿದರು.
ಒಂದು ಟನ್ ಶ್ರೀಗಂಧ ಬಳಕೆ
ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡ ಪಂಚಗವ್ಯ ಪುಣ್ಯಾಹ ಸಬಲ (ಸ್ಥಾನ) ಚತುರ್ವೇದ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಅಂತ್ಯಕ್ರಿಯೆಗೆ ಒಂದು ಟನ್ ಶ್ರೀಗಂಧ ಬಳಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.