ADVERTISEMENT

2023 ರ ಮಾರ್ಚ್‌ ಒಳಗೆ ರಾಜ್ಯದ ಏಳೂ ಸ್ಮಾರ್ಟ್‌ಸಿಟಿ ಕಾಮಗಾರಿ ಪೂರ್ಣ: ಸಚಿವ ಬೈರತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 11:06 IST
Last Updated 24 ಜನವರಿ 2022, 11:06 IST
 ಸ್ಮಾರ್ಟ್‌ಸಿಟಿ
ಸ್ಮಾರ್ಟ್‌ಸಿಟಿ    

ಬೆಂಗಳೂರು: ರಾಜ್ಯದ ಎಲ್ಲ ಏಳು ಸ್ಮಾರ್ಟ್‌ ಸಿಟಿ ಕಾಮಗಾರಿಗಳು 2023ರ ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿದ್ದು, ಆದರೆ 2023 ರ ಮಾರ್ಚ್‌ಗೆಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.

ಏಳು ಸ್ಮಾರ್ಟ್‌ ಸಿಟಿಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2020 ರ ಫೆಬ್ರುವರಿ ವೇಳೆಗೆ₹855 ಕೋಟಿ ಕಾಮಗರಿಗಳು ನಡೆದಿದ್ದವು. ಅಲ್ಲಿಂದ ಈಚೆಗೆ ₹2646 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದರು.

ನಾನು ನಗರಾಭಿವೃದ್ಧಿ ಇಲಾಖೆ ಸಚಿವನಾದ ಬಳಿಕ ರಾಜ್ಯದ ಸ್ಮಾರ್ಟ್‌ ಸಿಟಿಗಳ ಕಾಮಗಾರಿಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆಗಾಗಿ ಪ್ರತಿ ನಗರಕ್ಕೆ 8 ರಿಂದ 10 ಬಾರಿ ಭೇಟಿ ನೀಡಿದ್ದೇನೆ. ಕಾಮಗಾರಿಗಳ ವೇಗ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಂಡಿರುವುದೂ ಅಲ್ಲದೆ, ಗುಣಮಟ್ಟ ನಿಯಂತ್ರಣ ಪರಿಶೀಲನಾ ತಂಡವೂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ADVERTISEMENT

ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಟೆಂಡರ್ ಕರೆಯುವುದರಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ ಮತ್ತು ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವಲ್ಲಿ 4ನೇ ಸ್ಥಾನದಲ್ಲಿದೆ. ಕೊರೊನಾ, ಲಾಕ್‌ಡೌನ್, ಕಾರ್ಮಿಕರ ವಲಸೆ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದರೂ ಕಾಮಗಾರಿಗಳಿಗೆ ಹೆಚ್ಚಿನ ಹಣಕಾಸಿನ ವೆಚ್ಚ ಏರಿಕೆಯಾಗಿಲ್ಲ. ಬದಲಾಗಿ ಕಾಮಗಾರಿಗಳು ಪೂರ್ಣಗೊಳ್ಳುವುದರ ಕಾಲ ಮಿತಿ ಹೆಚ್ಚಾಗಿತ್ತು. ಹೀಗಿದ್ದರೂ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಮೈಸೂರು, ಬಳ್ಳಾರಿ, ಕಲಬುರಗಿ ಮತ್ತು ವಿಜಯಪುರವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಇದರ ಜತೆಗೆ ಇತ್ತೀಚೆಗೆ ಉತ್ತರಪ್ರದೇಶದ ಲಕ್ನೋಗೆ ತೆರಳಿದ್ದ ವೇಳೆ ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವ ಹರದೀಪ್‌ ಸಿಂಗ್ ಪುರಿ ಅವರ ಜತೆ ಮಾತನಾಡಿದ್ದೇನೆ ಎಂದು ಬಸವರಾಜ ಹೇಳಿದರು.

ಪ್ರಮುಖ ಅಂಶಗಳು

*ಸ್ಮಾಟ್‌ ಸಿಟಿಯಡಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಕಾಮಗಾರಿಗಳು ನಡೆದಿವೆ.

*ಯೋಜನೆಯಡಿ ಸ್ಮಾರ್ಟ್‌ ರಸ್ತೆಗಳ ಅಭಿವೃದ್ಧಿ, ಒಳಚರಂಡಿ, ಉದ್ಯಾನವನ ಅಭಿವೃದ್ಧಿ, ಕೆರೆಗಳ ಮತ್ತು ನದಿಗಳ ಪ್ರದೇಶ ಅಭಿವೃದ್ಧಿ, ಮಾರುಕಟ್ಟೆ, ಪಾರ್ಕಿಂಗ್‌, ಪಿಪಿಪಿ ಮಾದರಿಯಲ್ಲಿ ಸೌರಶಕ್ತಿ ಯೋಜನೆ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ಇನ್ನಿತರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳು.

* ಎಲ್ಲ ನಗರಗಳಲ್ಲಿ ಯೋಜನೆ ಅನುಷ್ಠಾನದ ಪರಿಶೀಲನೆ ಮತ್ತು ಮೇಲುಸ್ತುವಾರಿಗಾಗಿ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್‌ ಸಿಟಿ ಅಡ್ವೈಸರಿ ಫೋರಂ ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.