
ಸುವರ್ಣ ವಿಧಾನಸೌಧ (ಬೆಳಗಾವಿ): ‘ಸಾಮಾಜಿಕ ಭದ್ರತಾ ಯೋಜನೆಗಳು ದುರ್ಬಳಕೆಯಾಗುತ್ತಿದ್ದು, ಸುಮಾರು 24.50 ಲಕ್ಷ ಅಕ್ರಮ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
‘ರಾಜ್ಯದಲ್ಲಿ ನಿಖರವಾಗಿ ಕುಟುಂಬದ ಆದಾಯ ನಿರ್ಧರಿಸುವ ವ್ಯವಸ್ಥೆ ಇಲ್ಲದಿರುವುದರಿಂದ, ಅದರ ಲಾಭ ಪಡೆದು ಕೆಳ ಹಂತದ ಅಧಿಕಾರಿಗಳು ಆದಾಯ ಪ್ರಮಾಣಪತ್ರಗಳನ್ನು ಮನಬಂದಂತೆ ನೀಡುತ್ತಿದ್ದಾರೆ’ ಎಂದರು.
ವಿಧಾನಸಭೆಯಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಸಂದರ್ಭದಲ್ಲಿ ನಿಗದಿಪಡಿಸಿದ ವಯೋಮಿತಿಗೂ ಕಡಿಮೆ ವಯಸ್ಸಿನವರು ಸೌಲಭ್ಯ ಪಡೆಯುತ್ತಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು, ಎಚ್‌ಎಂಆರ್‌ಎಸ್‌ನಲ್ಲಿ ಮಾಹಿತಿ ಇರುವ ಸರ್ಕಾರಿ ನೌಕರರು ಕೂಡಾ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಫಲಾನುಭವಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿಸಲ್ಲಿಸುವ ಆದಾಯ ಮಿತಿಯನ್ನು ಬಿಪಿಎಲ್ ಕಾರ್ಡು ಮಾದರಿಯಲ್ಲಿ ₹ 1.20 ಲಕ್ಷಕ್ಕೆ ಹೆಚ್ಚಿಸುವಂತೆ ಮನವಿಗಳು ಬಂದಿವೆ. ಸದ್ಯ ಸರ್ಕಾರದ ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳಿಂದಲೇ ಪ್ರತಿ ಕುಟುಂಬಕ್ಕೆ ₹ 32 ಸಾವಿರಕ್ಕಿಂತಲೂ ಹೆಚ್ಚು ಹಣ ಜಮೆಯಾಗುತ್ತಿದೆ. ಹೀಗಾಗಿ, ಕುಟುಂಬದ ಆದಾಯ ಮಿತಿ ನಿಖರವಾಗಿ ನಿರ್ಧರಿಸುವ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಆದಾಯ ಮಿತಿ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.