ADVERTISEMENT

‘ನಮ್ಮ ತಟ್ಟೆಗೆ ಮಣ್ಣು ಬಿದ್ದಿದೆ’: ಊಟಕ್ಕೆ ಕರೆದ ಸಿಎಂಗೆ ಅತೃಪ್ತ ಶಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 1:49 IST
Last Updated 22 ಸೆಪ್ಟೆಂಬರ್ 2019, 1:49 IST
   

ಬೆಂಗಳೂರು:ಉಪಚುನಾವಣೆ ಘೋಷಣೆ ಬೆನ್ನಲ್ಲೆ ಇಕ್ಕಟ್ಟಿಗೆ ಸಿಲುಕಿರುವ ಅತೃಪ್ತ ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಊಟಕ್ಕೆ ಬನ್ನಿ’ ಎಂದು ಆಹ್ವಾನಿಸಿದ್ದಾರೆ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿರುವ ಅತೃಪ್ತರು, ‘ನಮ್ಮ ತಟ್ಟೆಗೆ ಮಣ್ಣು ಬಿದ್ದಿದೆ. ಭವಿಷ್ಯವೇ ಮಸುಕಾಗಿದೆ. ಇಂತಹ ಹೊತ್ತಿನಲ್ಲಿ ನಿಮ್ಮ ಊಟ ಯಾರಿಗೆ ಬೇಕು’ ಎಂದು ಕಿಡಿಕಾರಿದ್ದಾರೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಉಪಮುಖ್ಯಮಂತ್ರಿಗಳಾದ ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿದ ಅನರ್ಹರು, ಹೇಗಾದರೂ ತಮ್ಮನ್ನು ಕಾಪಾಡಿ ಎಂದು ದುಂಬಾಲು ಬಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಅರಣ್ಯ ಇಲಾಖೆ ಅತಿಥಿಗೃಹಕ್ಕೆ ಊಟಕ್ಕೆ ಬರುವಂತೆ ಕರೆದಿದ್ದರು.

‘ನಮ್ಮಿಂದ ನೀವು ಮುಖ್ಯಮಂತ್ರಿಯಾಗಿದ್ದೀರಿ. ಕೊಟ್ಟ ಭರವಸೆ ಈಡೇರಿಸಿಲ್ಲ. ಕೂಡಲೇ ಅಮಿತ್ ಶಾ ಭೇಟಿ ಮಾಡಿಸದಿದ್ದರೆ ನಮ್ಮ ರಾಜಕೀಯ ಸಮಾಧಿ ಖಂಡಿತ’ ಎಂದು ತಮ್ಮ ಸಿಟ್ಟು ಹೊರಹಾಕಿದ್ದಾರೆ.

ಸದ್ಯ 17 ಅನರ್ಹ ಶಾಸಕರುಸಭಾಧ್ಯಕ್ಷರ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ಇತ್ಯರ್ಥವಾಗುವ ಮೊದಲೇ ಉಪ ಚುನಾವಣೆ ಘೋಷಣೆಯಾಗಿರುವುದರಿಂದಾಗಿ ಅವರು ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

ಅರ್ಜಿ ಸೋಮವಾರ(ಸೆ.23) ವಿಚಾರಣೆಗೆ ಬರಲಿದ್ದು, ಅಲ್ಲಿ ತಮ್ಮ ಪರವಾದ ತೀರ್ಪು ಹೊರಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದಕ್ಕೆ ಮೊದಲೇ ಚುನಾವಣೆ ಘೋಷಣೆಯಾಗಿದೆ. ಒಂದುವೇಳೆಕೋರ್ಟ್‌ನಿಂದ ಯಾವುದೇ ತೀರ್ಪು ಹೊರಬರದಿದ್ದರೆಅನರ್ಹರು ಸ್ಪರ್ಧಿಸುವ ಅವಕಾಶವೇ ಇಲ್ಲ.

**

ಚುನಾವಣೆ ಇಷ್ಟು ಬೇಗ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೂ, ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಜೆಡಿಎಸ್‌ನೊಂದಿಗೆ ಮೈತ್ರಿ ಕುರಿತು ಹೈಕಮಾಂಡ್‌ ತೀರ್ಮಾನಿಸುತ್ತದೆ
– ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

**

ಉಪ ಚುನಾವಣೆಯಲ್ಲಿ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 15 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, 8ರಿಂದ 10 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವುದು ನಿಶ್ಚಿತ
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

**

ಸುಪ್ರೀಂಕೋರ್ಟ್‌ ಮತ್ತು ಚುನಾವಣಾ ಆಯೋಗ ಅನರ್ಹ ಶಾಸಕರ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ. ಚುನಾವಣೆಗೆ ನಮ್ಮ ಪಕ್ಷ ಸಿದ್ಧವಾಗಿದೆ. 15ರಲ್ಲೂ ಗೆಲ್ಲುತ್ತೇವೆ
– ನಳಿನ್ ಕುಮಾರ್ ಕಟೀಲ್,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.