ADVERTISEMENT

ಅರಣ್ಯದಂಚಿನಲ್ಲಿ ತುಂಡಾದ ಸೌರಬೇಲಿ

ಕಳಪೆ ಗುಣಮಟ್ಟದ ಕಾಮಗಾರಿ, ಕ್ರಮಕ್ಕೆ ಗ್ರಾಮಸ್ಥರ ಆಗ್ರಹ, ಕಾಡಾನೆಗಳ ಹಾವಳಿ

ರಘು ಹೆಬ್ಬಾಲೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಕುಶಾಲನಗರ ಸಮೀಪದ ಚಿಕ್ಲಿಹೊಳೆ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಅಳವಡಿಸಿರುವ ಸೌರಬೇಲಿ ತುಂಡಾಗಿವೆ
ಕುಶಾಲನಗರ ಸಮೀಪದ ಚಿಕ್ಲಿಹೊಳೆ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಅಳವಡಿಸಿರುವ ಸೌರಬೇಲಿ ತುಂಡಾಗಿವೆ   

ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು ಹಾಗೂ ಮಾಲ್ದಾರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ಅಳವಡಿಸಿದ್ದ ಸೌರಬೇಲಿ ಕಿತ್ತು ಹೋಗಿದ್ದು, ಕಾಡಂಚಿನ ಗ್ರಾಮಗಳ ಜನರಿಗೆ ಕಾಡುಪ್ರಾಣಿಗಳ ಭೀತಿ ಎದುರಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಏಳನೇ ಹೊಸಕೋಟೆ ಮೇಟ್ನಹಳ್ಳದಿಂದ ಕಂಬಿಬಾಣೆ ಗ್ರಾ.ಪಂ ವ್ಯಾಪ್ತಿಯ ಚಿಕ್ಲಿಹೊಳೆ ಜಲಾಶಯದವರೆಗಿನ 6 ಕಿ.ಮೀ ದೂರದವರೆಗೆ ಸೌರಬೇಲಿಯನ್ನು ಅಳವಡಿಸಲಾಗಿತ್ತು. ಈ ಬೇಲಿಯ ತಂತಿಗಳು ತುಂಡಾಗಿದ್ದು, ನಿರಂತರವಾಗಿ ಕಾಡಾನೆ ಹಿಂಡು ಕಾಫಿ ತೋಟಗಳಿಗೆ ಹಾಗೂ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

₹60 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಸೌರಬೇಲಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೆಲವೆಡೆ ಬೇಲಿಗಳು ಮುರಿದು ಬಿದ್ದಿವೆ. ಇವುಗಳನ್ನು ದುರಸ್ತಿಪಡಿಸಬೇಕು ಎಂದು ಕಾಡಂಚಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಮಾಲ್ದಾರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲೂ ಸೌರಬೇಲಿ ಅಳವಡಿಸಿದ್ದು, ಅಲ್ಲಿಯೂ ತಂತಿ ಬೇಲಿಗಳು ತುಂಡಾಗಿವೆ. ಮೈಸೂರಿನ ಗುತ್ತಿಗೆದಾರರ ಅಂಬರೀಷ್ ಎಂಬುವರು ಸೌರಬೇಲಿ ಅಳವಡಿಕೆ ಕಾಮಗಾರಿ ನಡೆಸಿದ್ದು, ಯೋಜನೆ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕಳಪೆ ಗುಣಮಟ್ಟದ ತಂತಿಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಒತ್ತಾಯಿಸಿದ್ದಾರೆ.

ಸೌರಬೇಲಿ ಮುರಿದು ಬಿದ್ದಿರುವುದರಿಂದ ಬೇಟೆಗಾರರು ಹಾಗೂ ಮರಗಳ್ಳರು ಸುಲಭವಾಗಿ ಅರಣ್ಯದೊಳಗೆ ಪ್ರವೇಶಿಸುವಂತಾಗಿದೆ. ಈ ಮೊದಲು ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿ ಬೇಟೆಗಾರರು ಹಾಗೂ ಮರಗಳ್ಳರು ಅಡ್ಡದಾರಿ ಮೂಲಕ ಕಾಡಿನೊಳಗೆ ಪ್ರವೇಶಿಸುತ್ತಿದ್ದರು. ಆದರೀಗ ಸುಲಭವಾಗಿ ಕಾಡು ಪ್ರವೇಶಿಸಿ ಬೇಟೆಯಾಡಲು ದಾರಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.