ADVERTISEMENT

ರಾಜ್ಯದಲ್ಲಿ ₹882 ಕೋಟಿ ವೆಚ್ಚದಲ್ಲಿ ಸೌರಕೋಶ ಘಟಕ: ಜಪಾನ್‌ ಕಂಪನಿಯಿಂದ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 23:06 IST
Last Updated 12 ಸೆಪ್ಟೆಂಬರ್ 2025, 23:06 IST
   

ಬೆಂಗಳೂರು: ‘ಜಪಾನಿನ ಹೊಸಾಡಾ ಹೋಲ್ಡಿಂಗ್ಸ್‌ ಕಂಪನಿಯು ರಾಜ್ಯದಲ್ಲಿ ಸೌರಕೋಶ ತಯಾರಿಕಾ ಘಟಕವನ್ನು ಸ್ಥಾಪಿಸಲು ₹882 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಬಂಡವಾಳ ಆಕರ್ಷಣೆಗಾಗಿ ಜಪಾನ್‌ ಪ್ರವಾಸದಲ್ಲಿರುವ ಎಂ.ಬಿ.ಪಾಟೀಲರು ಹೋಸಾಡಾ ಹೋಲ್ಡಿಂಗ್ಸ್‌ ಅಧ್ಯಕ್ಷ ನಕಾಮುರಾ ಸ್ಯಾನ್‌ ಅವರ ಭೇಟಿಯ ನಂತರ ಈ ಮಾಹಿತಿ ನೀಡಿದ್ದಾರೆ.

‘ತೋಂಗ್‌ ತರ್‌ ಎನರ್ಜಿ ಸೊಲ್ಯೂಷನ್ಸ್‌ (ಟಿಟಿಇಎಸ್‌) ಸಹಯೋಗದಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಫೆಬ್ರುವರಿಯಲ್ಲಿ
ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಟಿಟಿಇಎಸ್‌ ಕಂಪನಿಯು ₹490 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ ಹೊಸಾಡಾ ಹೋಲ್ಡಿಂಗ್ಸ್‌ ಸಹಯೋಗದಲ್ಲಿ ಒಟ್ಟು ₹882 ಕೋಟಿ ಹೂಡಿಕೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಸೌರಫಲಕಗಳಲ್ಲಿ ಬಳಸುವ ಸೌರಕೋಶಗಳ ತಯಾರಿಕೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ. ದೇಶದ ಸೌರಕೋಶಗಳ ಬೇಡಿಕೆ ಪೂರೈಸುವಲ್ಲಿ ರಾಜ್ಯಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಈ ಘಟಕದಿಂದ 500 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.

‘ಕ್ರೀಡಾ ಪರಿಕರಗಳ ತಯಾರಿಕಾ ಕಂಪನಿ ಇನಾಬತಾವು ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸಲಿದ್ದು, 2027ರಲ್ಲಿ ಅದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಡೈ ತಯಾರಿಕಾ ಕಂಪನಿ ಟೆತ್ಸುಜಿಕಾವಾ ರಾಜ್ಯದಲ್ಲಿನ ತನ್ನ ಘಟಕವನ್ನು ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.