ಬೆಂಗಳೂರು: ಜಲ ವಿದ್ಯುತ್ ಉತ್ಪಾದಿಸುವ ಕದ್ರಾ ಜಲಾಶಯ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ (ಡಬ್ಲ್ಯುಟಿಇ) ಬಿಡದಿಯ ಘಟಕ ಹಾಗೂ ರಾಜ್ಯದ ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಇನ್ನು ಮುಂದೆ ಸೌರವಿದ್ಯುತ್ ಕೂಡ ಉತ್ಪಾದನೆಯಾಗಲಿದೆ.
ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ನಿಯಮಿತದ ವ್ಯಾಪ್ತಿಯಲ್ಲಿರುವ ‘ತೆಹ್ರಿ’ (ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್–ಟಿಎಚ್‌ಡಿಸಿಎಲ್) ಮೂಲಕ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು (ಕೆಪಿಸಿಎಲ್), ತನ್ನ ವಿದ್ಯುತ್ ಉತ್ಪಾದನಾ ಘಟಕಗಳ ಆವರಣದಲ್ಲಿ ಸೌರ ಫಲಕಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ.
ತೇಲುವ ಸೌರಫಲಕಗಳು: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕದ್ರಾ ಜಲಾಶಯದ ಹಿನ್ನೀರಿನ 536 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ತೇಲುವ ಸೌರಫಲಕಗಳನ್ನು ಅಳವಡಿಸಿ 100 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇದು ಅಂದಾಜು ₹650 ಕೋಟಿ ವೆಚ್ಚದ ಯೋಜನೆ.
ಎರಡು ವರ್ಷಗಳಿಂದ ಚರ್ಚೆಯ ಹಂತದಲ್ಲಿದ್ದ ಈ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದೆ. ಸದ್ಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ‘ತೆಹ್ರಿ’ಗೆ ಸಲ್ಲಿಸಿದ್ದು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಕೆಪಿಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಡದಿ ಡಬ್ಲ್ಯುಟಿಇ ಬಳಿ: ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಡಬ್ಲ್ಯುಟಿಇ ಘಟಕದ ಆವರಣದಲ್ಲಿ 20 ಮೆಗಾವಾಟ್ ಸೌರವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದು ₹92.81 ಕೋಟಿ ವೆಚ್ಚದ ಯೋಜನೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹೆಚ್ಚು ವಿದ್ಯುತ್ ಉತ್ಪಾದಿಸುವಂತಹ ವಿಶೇಷ ಸೌರಫಲಕಗಳನ್ನು ಈ ಘಟಕದಲ್ಲಿ ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ: ರಾಯಚೂರು (ಆರ್‌ಟಿಪಿಎಸ್), ಯರಮರಸ್ (ವೈಟಿಪಿಎಸ್) ಮತ್ತು ಬಳ್ಳಾರಿ (ಬಿಟಿಪಿಎಸ್) ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಬಳಿ ಸೌರಫಲಕಗಳನ್ನು ಅಳವಡಿಸಿ 101 ಮೆಗಾವಾಟ್ ಸೌರವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇದು ₹414.95 ಕೋಟಿ ವೆಚ್ಚದ ಯೋಜನೆ.
ಆರ್‌ಟಿಪಿಎಸ್ ಬಳಿ ₹228.08 ಕೋಟಿ ವೆಚ್ಚದಲ್ಲಿ 53.9 ಮೆಗಾವಾಟ್, ವೈಟಿಪಿಎಸ್ ಸಮೀಪ ₹125.31 ಕೋಟಿ ವೆಚ್ಚದಲ್ಲಿ 30.8 ಮೆಗಾವಾಟ್ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಬಿಟಿಪಿಎಸ್) ಬಳಿ ₹67.56 ಕೋಟಿ ವೆಚ್ಚದಲ್ಲಿ 15.4 ಮೆಗಾವಾಟ್ ವಿದ್ಯುತ್ ಸ್ಥಾಪಿಸುವ ಗುರಿ ಇದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
ಈ ಯೋಜನೆಯ ಡಿಪಿಆರ್‌ಗೆ ಅನುಮೋದನೆ ದೊರೆತು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು. ಆದರೆ, ಟೆಂಡರ್‌ನಲ್ಲಿ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಿಗದಿಪಡಿಸಿರುವ ಯೂನಿಟ್ ದರಕ್ಕಿಂತ ಹೆಚ್ಚು ಬಿಡ್ ಮಾಡಿದ ಕಾರಣ, ಮರು ಟೆಂಡರ್ ಕರೆಯಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಈ ಮೂರು ಘಟಕಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಗ್ರಾಹಕರಿಗೆ ಸರಬರಾಜು ಮಾಡಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಅನುಮೋದನೆ ನೀಡಿದೆ. ಯಾವ ಘಟಕದಿಂದ, ಯಾವ ಭಾಗಕ್ಕೆ ಎಷ್ಟು ವಿದ್ಯುತ್ ಪೂರೈಸಬೇಕು ಎಂಬುದನ್ನು ಘಟಕದ ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ ನಿರ್ಧರಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೌರ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳು ಭವಿಷ್ಯದ ಇಂಧನಗಳಾಗಿವೆ. ಹೀಗಾಗಿ ಕೆಪಿಸಿಎಲ್‌ನಿಂದ ವಿವಿಧ ವಿದ್ಯುತ್ ಸ್ಥಾವರಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ನಿರ್ಧರಿಸಿ ಪ್ರಕ್ರಿಯೆ ಆರಂಭಿಸಲಾಗಿದೆ. ಹಗಲು ವೇಳೆ ಸೌರ ವಿದ್ಯುತ್ ಉತ್ಪಾದಿಸಿ ಪೂರೈಸುವುದು ರಾತ್ರಿ ಶಾಖೋತ್ಪನ್ನ ಮತ್ತು ಜಲ ವಿದ್ಯುತ್ತನ್ನು ಉತ್ಪಾದಿಸಿ ವಿದ್ಯುತ್ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸುವುದು ಇದರ ಉದ್ದೇಶ- ಕೆ.ಜೆ.ಜಾರ್ಜ್ ಇಂಧನ ಸಚಿವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.