ADVERTISEMENT

ಕಸದ ಶುಲ್ಕ | ಸಾರ್ವಜನಿಕರಿಗೆ ದೊಡ್ಡ ಬರೆ; ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 22:21 IST
Last Updated 9 ಏಪ್ರಿಲ್ 2025, 22:21 IST
<div class="paragraphs"><p> ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿದರು </p></div>

ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿದರು

   

ಬೆಂಗಳೂರು: ಘನ ತ್ಯಾಜ್ಯ ವಿಲೇವಾರಿಗೆ ಬಳಕೆದಾರರ ಶುಲ್ಕ ಸಂಗ್ರಹಿಸುವ ಸಂಬಂಧ ಬಿಬಿಎಂಪಿಯು ಹೊರಡಿಸಿರುವ ಆದೇಶ ಸಾರ್ವಜನಿಕರು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಘ ಸಂಸ್ಥೆಗಳ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ದೂರಿದರು.

2025–26ನೇ ಸಾಲಿನ ಆಸ್ತಿ ತೆರಿಗೆ ಜತೆ ತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ಮತ್ತು ಸುಂಕವನ್ನು ವಿಧಿಸಲಾಗುತ್ತಿದೆ. ಇದು ಜನ ವಿರೋಧಿ ಕೃತ್ಯ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಇದೇ 5ರಂದು ಹೊರಡಿಸಿದ ಸುತ್ತೋಲೆಯನ್ನು ಕಾನೂನಿನ ಪರಿಜ್ಞಾನವಿಲ್ಲದೇ ಮಾಡಿದಂತಿದೆ. ಕಟ್ಟಡದ ನಿವೇಶನದ ಅಳತೆಯ ಆಧಾರದಲ್ಲಿ ಶುಲ್ಕ ವಿಧಿಸುವ ಬದಲಾಗಿ ಕಟ್ಟಡದ ವಿಸ್ತೀರ್ಣವನ್ನು ಆಧರಿಸಿ ಸೆಸ್‌ ಶುಲ್ಕದ ಜತೆಗೆ ಬಳಕೆದಾರರ ಶುಲ್ಕವನ್ನೂ ವಿಧಿಸಿದ್ದಾರೆ ಎಂದರು.

600 ಚದರಡಿ ಮೇಲಿನವರಿಗೆ ತಿಂಗಳಿಗೆ ₹10 ಮತ್ತು 1,000 ಚದರಡಿಯಿಂದ 2,000 ಚದರಡಿಯವರಿಗೆ ತಿಂಗಳಿಗೆ ₹100 ವಿಧಿಸಲಿದ್ದಾರೆ. ತಿಂಗಳು ಮತ್ತು ವರ್ಷ ಎಂದು ಮಂಗಳವಾರ ಸ್ಪಷ್ಟೀಕರಣ ನೀಡಿದ್ದಾರೆ. ತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕವನ್ನು ಪ್ರತಿ ತಿಂಗಳ ಬದಲಾಗಿ ಒಮ್ಮೆಲೆ ಮುಂಚಿತವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಸತಿಯೇತರ ಉದ್ದೇಶ ಅಥವಾ ವಾಣಿಜ್ಯ ಉದ್ದೇಶದ ಬಳಕೆಗೆ ಸಂಬಂಧಿಸಿದಂತೆ, ಬಾಡಿಗೆ ಕಟ್ಟಡಕ್ಕೆ 1,000 ಚದರಡಿ ಮೇಲಿದ್ದರೆ ವರ್ಷಕ್ಕೆ ₹2,000, ಒಂದು ಸಾವಿರ ಚದರಡಿಯಿಂದ 2,000 ಚದರಡಿಗೆ ₹6,000, 2000 ಚದರಡಿಯಿಂದ 5000 ಚದರಡಿಗೆ ₹14,000, 5000 ಚದರಡಿಯಿಂದ 10 ಸಾವಿರ ಚದರಡಿ ಇದ್ದರೆ ₹38 ಸಾವಿರ, 10 ಸಾವಿರ ಚದರಡಿಯಿಂದ 20 ಸಾವಿರ ಚದರಡಿಗೆ ₹70 ಸಾವಿರ, ಗರಿಷ್ಠ 5 ಲಕ್ಷ ಚದರಡಿಗಿಂತ ಹೆಚ್ಚಿದ್ದರೆ ₹35 ಲಕ್ಷ ವಿಧಿಸಲಾಗುತ್ತದೆ. ಇದು ತ್ಯಾಜ್ಯ ಬಳಕೆದಾರರ ಶುಲ್ಕವಾಗಿದ್ದು, ಸೆಸ್‌ ಅನ್ನು ಒಳಗೊಂಡಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.