ADVERTISEMENT

ಪರಿಹಾರಕ್ಕೆ ಮೂರೂವರೆ ತಿಂಗಳು ಬೇಕು: ಸಚಿವ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 12:58 IST
Last Updated 4 ಅಕ್ಟೋಬರ್ 2019, 12:58 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಬಳ್ಳಾಪುರ: ‘ಸಾಮಾನ್ಯವಾಗಿ ನೆರೆ ಪರಿಹಾರಕ್ಕೆ ಮೂರೂವರೆ ತಿಂಗಳ ಸಮಯ ಬೇಕು. ನಮ್ಮಲ್ಲಿ ನೆರೆ ಸಂಭವಿಸಿ ಈಗ ಎರಡು ತಿಂಗಳು ಕಳೆದಿದೆ. ಆದರೆ ಈಗ ಏನಾದರೂ ಮಾಡಿ ತಪ್ಪು ಹುಡುಕಬೇಕು ಎಂಬ ಮನೋಭಾವ ಇರುವವರ ಜತೆಗೆ ಭಾವನಾತ್ಮಕವಾಗಿಯೂ ಬೆಂಬಲಿಸುವವರು ಸೇರಿಕೊಂಡಿರುವುದರಿಂದ ನಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ 11 ರಾಜ್ಯಗಳಲ್ಲಿ ನೆರೆ ಹಾನಿ ಸಂಭವಿಸಿದೆ. ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ಈವರೆಗೆ ಪರಿಹಾರ ನೀಡಿಲ್ಲ. ಮಾಹಿತಿ ಕೊರತೆಯಿಂದ ಕೆಲ ತಪ್ಪು ಸಂದೇಶಗಳು ಹರಿದಾಡುತ್ತಿವೆ. ಕಳೆದ ವರ್ಷವೂ ಮೂರೂವರೆ ತಿಂಗಳ ಬಳಿಕ ಪರಿಹಾರ ಬಂದಾಗ ಅದು ಸುದ್ದಿಯೇ ಆಗಿರಲಿಲ್ಲ’ ಎಂದು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಒಂದೇ ಒಂದು ಸ್ಥಾನ ಗೆಲ್ಲಿಸದ ಕೇರಳಕ್ಕೇ ಪರಿಹಾರ ನೀಡಿರುವಾಗ, ಕರ್ನಾಟಕಕ್ಕೆ ಪರಿಹಾರ ಕೊಡುವುದಿಲ್ಲ ಎಂದು ಯೋಚಿಸುವುದೇ ಮೂರ್ಖತನದ್ದು. ಖಂಡಿತ ನಮಗೆ ಕೇಂದ್ರದ ಪರಿಹಾರ ದೊರೆಯುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕೆ ಹಣ ಇಲ್ಲ ಎಂದು ಎಲ್ಲೂ ಹೇಳಿಲ್ಲ. ಸರ್ಕಾರ ಈಗಾಗಲೇ ₹2,500 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಅವರ ಖಾತೆಗಳಲ್ಲಿ ಹಣವಿದೆ’ ಎಂದರು.

ADVERTISEMENT

‘ಮೋದಿ ಅವರು ನೆರೆ ವಿಚಾರದಲ್ಲಿ ಕರ್ನಾಟಕ ಮಾತ್ರವಲ್ಲ ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣವಾದ ಗುಜರಾತ್‌ ಬಗ್ಗೆ ಕೂಡ ಮಾತನಾಡಿಲ್ಲ. ನಕಾರಾತ್ಮಕವಾಗಿ ನೋಡಿದರೆ ಎಲ್ಲವೂ ಹಾಗೇ ಕಾಣುತ್ತದೆ. ಸಕಾರಾತ್ಮಕವಾಗಿ ನೋಡಿದರೆ ಅವರ ಪ್ರಾಮಾಣಿಕತೆ, ಪರಿಶ್ರಮ, ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ನಡೆಸಿರುವ ಪ್ರಯತ್ನ ಗೋಚರಿಸುತ್ತದೆ. ನಮಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದು ಗೊತ್ತಿದೆ. ನಾವು ಕಾಪಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್‌ ನೀಡಿರುವ ಕುರಿತ ಪ್ರಶ್ನೆಗೆ, ‘ಸಾರ್ವಜನಿಕ ಹಿತಾಸಕ್ತಿ ಪರ ಧ್ವನಿ ಎತ್ತಲು ನಮಗೆ ಪಕ್ಷ ಯಾವತ್ತೂ ಅವಕಾಶ ಮಾಡಿಕೊಟ್ಟಿದೆ. ಪಕ್ಷದ ವೇದಿಕೆಯಲ್ಲಿ ಮಾತನಾಡಲು ಕೂಡ ಅವಕಾಶವಿತ್ತು. ವ್ಯಕ್ತಿಗತ ಟೀಕೆ ಬೇರೆ, ಸಾರ್ವಜನಿಕ ಹಿತಾಸಕ್ತಿಯಿಂದ ಧ್ವನಿ ಎತ್ತುವುದು ಬೇರೆ. ಪರಿಹಾರ ಕೇಳುವುದು ತಪ್ಪಲ್ಲ. ಆದರೆ ಅದನ್ನೂ ಮೀರಿ ಮಾತನಾಡಿದ್ದಾರೆ. ನಾನೂ ಮಾತನಾಡಿರುವೆ ನನಗೆ ಯಾವ ನೋಟಿಸ್‌ ಬಂದಿಲ್ಲ’ ಎಂದು ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.