ADVERTISEMENT

ಪಂಚಾಯಿತಿಗೊಂದು ಸಹಕಾರ ಸಂಘ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 20:07 IST
Last Updated 22 ಜನವರಿ 2021, 20:07 IST
ಎಸ್‌.ಟಿ. ಸೋಮಶೇಖರ್‌
ಎಸ್‌.ಟಿ. ಸೋಮಶೇಖರ್‌   

ತುಮಕೂರು: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಡಿಸಿಸಿ ಬ್ಯಾಂಕ್‌ಗಳ ಮೂಲಕ ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಿ ರೈತರಿಗೆ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಲ್ಲಿ ಶುಕ್ರವಾರ ತಿಳಿಸಿದರು.

ಪ್ರಸ್ತುತ ಎಲ್ಲೆಡೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ಗಳು ಇಲ್ಲ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತಷ್ಟು ರೈತರಿಗೆ ಹೆಚ್ಚಿನಸಾಲ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತುಮಕೂರು ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರು ನಿಧನರಾದರೆ ಅಂತಹವರ ಸಾಲದ ಒಟ್ಟು ಬಾಕಿ ಮೊತ್ತದಲ್ಲಿ ₹1 ಲಕ್ಷದವರೆಗೆ ಮನ್ನಾ ಮಾಡಲಾಗುತ್ತಿದೆ. ಇದೇ ಮಾದರಿಯನ್ನು ಅನುಸರಿಸುವಂತೆ ರಾಜ್ಯದ ಇತರೆ ಡಿಸಿಸಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗುವುದು. ಕಲಬುರ್ಗಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದು, ಉಳಿದ 19 ಬ್ಯಾಂಕ್‌ಗಳಲ್ಲಿ ಈ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಬಾಕಿ ಬಿಡುಗಡೆ: ರೈತರ ಸಾಲ ಮನ್ನಾ ಯೋಜನೆಯಲ್ಲಿ ಬಾಕಿ ಇರುವ ಕಂತು ಪಾವತಿಗೆ ಶೀಘ್ರವೇ ₹295 ಕೋಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಈ ಯೋಜನೆಗೆ ₹5,092 ಕೋಟಿ ಬಿಡುಗಡೆ ಮಾಡಿದ್ದಾರೆ. ಸಾಲ ಮನ್ನಾ ಯೋಜನೆಗೆ ನೀಡಬೇಕಿರುವ ಬಾಕಿ ಹಣವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಸಾಲದ ಗುರಿ: ಈ ವರ್ಷ ರಾಜ್ಯದಲ್ಲಿ ರೈತರಿಗೆ ₹15,300 ಕೋಟಿ ಸಾಲ ನೀಡುವ ಗುರಿ ಹೊಂದಿದ್ದು, ಈವರೆಗೆ ₹12,543 ಕೋಟಿ ಸಾಲ ನೀಡಲಾಗಿದೆ. ಇನ್ನು ಉಳಿದಿರುವ ಎರಡು ತಿಂಗಳಲ್ಲಿ ಗುರಿ ಮುಟ್ಟಲಾಗುವುದು. ರೈತರು ಸೇರಿದಂತೆ ಬಡವರ ಬಂಧು, ಪರಿಶಿಷ್ಟ ಜಾತಿ ಹಾಗೂ ವರ್ಗ, ಸ್ತ್ರೀಶಕ್ತಿ ಕಾಯಕ ಯೋಜನೆಯಲ್ಲಿ ಸುಮಾರು 24 ಸಾವಿರ ಮಂದಿಗೆ ಸಾಲ ಕೊಡಲಾಗಿದೆ ಎಂದು ತಿಳಿಸಿದರು.

ಯಶಸ್ವಿನಿ: ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮುಂದುವರಿಸುವಂತೆ ರೈತರಿಂದ ಬೇಡಿಕೆ ಬಂದಿದ್ದು, ಈ ಸಂಬಂಧ ಮುಖ್ಯಮಂತ್ರಿ, ಆರೋಗ್ಯ ಇಲಾಖೆ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.