
ಬೆಂಗಳೂರು: ‘ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಬಳಕೆದಾರ ಶುಲ್ಕ ಸಂಗ್ರಹವು, ನಿಯಮ ಬಾಹಿರವಾಗಿದ್ದು ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಹೈಕೋರ್ಟ್ ಸಾರಿದೆ.
ಈ ಸಂಬಂಧ ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಒಂದು ತಿಂಗಳ ಒಳಗಾಗಿ ಉಚಿತ ಪಾಸ್‌ಗಳನ್ನು ನೀಡಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಟೋಲ್ ಪ್ಲಾಜಾ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗೆ ನಿರ್ದೇಶಿಸಿರುವ ನ್ಯಾಯಪೀಠ, ‘ಈ ಪ್ರಕ್ರಿಯೆಯನ್ನು 30 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದೆ.
‘ಒಂದು ವೇಳೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದಿದ್ದರೆ, ಪ್ರತಿವಾದಿಗಳು ಸೋಮನಹಳ್ಳಿಯಲ್ಲಿ ಟೋಲ್ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಟೋಲ್ ಪ್ಲಾಜಾವನ್ನು, ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು–2008ರ ಪ್ರಕಾರ ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
‘ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಟೋಲ್ ಪ್ಲಾಜಾ, ನಿಯಮಗಳನ್ನು ಉಲ್ಲಂಘಿಸಿದೆ. ಸರ್ವೀಸ್ ರಸ್ತೆಯನ್ನು ಒದಗಿಸದೆ ಟೋಲ್ ವಿಧಿಸುವುದು ಏಕಪಕ್ಷೀಯ ಮತ್ತು ಅಸಮಂಜಸ. ಇಂತಹ ಸೌಲಭ್ಯವು ಪುರಸಭೆ ಅಥವಾ ನಗರ ವ್ಯಾಪ್ತಿಯಿಂದ 10 ಕಿ.ಮೀ ದೂರವಿರಬೇಕು. ಸುರಕ್ಷತಾ ಕ್ರಮಗಳನ್ನು ಅಳವಡಿಸದೆ, ಸ್ಥಳೀಯ ನಿವಾಸಿಗಳಿಂದ ಟೋಲ್ ಸಂಗ್ರಹಕ್ಕೆ ಒತ್ತಾಯ ಮಾಡುವುದು ಅನ್ಯಾಯ ಮತ್ತು ದಬ್ಬಾಳಿಕೆಯಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.
ಮಾಗಡಿ ಮುಖ್ಯ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ‘ಮೆಗಾ ಕೃಷಿ ಮಾರುಕಟ್ಟೆ’ ನಿರ್ಮಾಣಕ್ಕಾಗಿ 172 ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಪ್ರಶ್ನಿಸಲಾದ ಮೇಲ್ಮನವಿಯನ್ನು ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಭೂ ಸ್ವಾಧೀನ ಕ್ರಮವನ್ನು ಪ್ರಶ್ನಿಸಿ ‘ಜಮನಾಲಾಲ್ ಬಜಾಜ್ ಸೇವಾ ಟ್ರಸ್ಟ್‘ ಅಧ್ಯಕ್ಷ ರಾಹುಲ್ ಬಜಾಜ್ ಸೇರಿದಂತೆ ಒಟ್ಟು ಎಂಟು ಜನ ಟ್ರಸ್ಟಿಗಳು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು; ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಿಯೋಜನೆಗೊಂಡಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ವಿಶೇಷ ನ್ಯಾಯಪೀಠ ಈ ಮೊದಲು ತಿರಸ್ಕರಿಸಿತ್ತು. ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಪ್ರಶ್ನಿಸಿ ‘ಜಮನಾಲಾಲ್ ಬಜಾಜ್ ಸೇವಾ ಟ್ರಸ್ಟ್‘ ರಿಟ್ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಇದೀಗ ‘ಏಕಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ಯಾವುದೇ ಲೋಪಗಳಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ್ ವಾದ ಮಂಡಿಸಿದ್ದರು.
ಪ್ರಕರಣ: ‘ಮಾಗಡಿ ಮುಖ್ಯ ರಸ್ತೆಯಲ್ಲಿನ ಶ್ರೀಗಂಧ ಕಾವಲ್‌ನಲ್ಲಿ 172 ಎಕರೆ 22 ಗುಂಟೆ ಹೇರೋಹಳ್ಳಿಯ ಎರಡು ಪ್ರದೇಶಗಳಲ್ಲಿ ಕ್ರಮವಾಗಿ 104 ಎಕರೆ 05 ಗುಂಟೆ ಹಾಗೂ 3 ಎಕರೆ 34 ಗುಂಟೆ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ಮತ್ತು ಬೆಂಗಳೂರು ಜಿಲ್ಲಾಧಿಕಾರಿ 1999ರ ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.