ADVERTISEMENT

ಅಕ್ರಮ ಗಣಿಗಾರಿಕೆ: ಸಂಸದ ಸುರೇಶ್‌ ದೋಷಮುಕ್ತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 20:17 IST
Last Updated 26 ಜೂನ್ 2019, 20:17 IST
   

ಬೆಂಗಳೂರು: ರಾಮನಗರ ಜಿಲ್ಲೆಯ ಸಾತನೂರು ಮತ್ತು ಕನಕಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಿರು ಅರಣ್ಯ ಗಡಿ ಒತ್ತುವರಿ ಮಾಡಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ ಸಂಸದ ಡಿ.ಕೆ.ಸುರೇಶ್‌ ಅವರನ್ನು ಜನಪ್ರತಿನಿಧಿಗಳ ಕೋರ್ಟ್‌ ದೋಷಮುಕ್ತಗೊಳಿಸಿದೆ.

ಈ ಕುರಿತಂತೆ ಸಾತನೂರು ಮತ್ತು ಕನಕಪುರ ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿದ್ದ ಫಿರ್ಯಾದನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಬುಧವಾರ ವಜಾಗೊಳಿಸಿದೆ.

‘ಸಾತನೂರು ಹೋಬಳಿಯ ಕುನೂರು ಗ್ರಾಮದ ಅರ್ಕಾವತಿ ಕಿರು ಅರಣ್ಯ ಮತ್ತು ಕೋಟೆಕೊಪ್ಪ ಗ್ರಾಮದ ಮುನೇಶ್ವರನ ಬೆಟ್ಟದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗಿದೆ’ ಎಂದು ಆರೋಪಿಸಿ 2006 ಸೆಪ್ಟೆಂಬರ್‌ನಲ್ಲಿ ಅರಣ್ಯ ಅಧಿಕಾರಿಗಳು ದೂರು ದಾಖಲಿಸಿದ್ದರು. ಈ ಸಂಬಂಧ 2018ರ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ADVERTISEMENT

ಸುರೇಶ್ ಪರ ವಕೀಲರು, ‘12 ವರ್ಷಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಮತ್ತು ಈ ವಿಳಂಬಕ್ಕೆ ಕಾರಣ ನೀಡಿಲ್ಲ. ಆದ್ದರಿಂದ ಗಣಿ ಗುತ್ತಿಗೆ ಪಡೆದಿ
ರುವ ಡಿ.ಕೆ.ಸುರೇಶ್‌ ಅವರನ್ನು ದೋಷಮುಕ್ತ ಗೊಳಿಸಬೇಕು’ ಎಂದು ಕೋರಿದ್ದರು.

ಸುರೇಶ್ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಮತ್ತು ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.