ADVERTISEMENT

ಅಸ್ಪೃಶ್ಯತೆ ಮುಕ್ತ ಗ್ರಾ.ಪಂ.ಗೆ ವಿಶೇಷ ಅನುದಾನ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 16:24 IST
Last Updated 14 ಏಪ್ರಿಲ್ 2022, 16:24 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ರಾಜ್ಯದಲ್ಲಿ ಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯಿತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಅನುದಾನ ನೀಡುವ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಸ್ಪೃಶ್ಯತೆ ನಿವಾರಣೆಯ ದಿಕ್ಕಿನಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿಗಳಿಗೆ ಉತ್ತೇಜನ ನೀಡುವ ಯೋಚನೆ ಇದೆ. ಸಂಪೂರ್ಣವಾಗಿ ಅಸ್ಪೃಶ್ಯತೆಯನ್ನು ತೊಡೆದುಹಾಕಿರುವ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ನೀಡುವ ಯೋಚನೆ ಇದೆ’ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದ ಮಗುವೊಂದು ದೇವಸ್ಥಾನದ ಒಳಕ್ಕೆ ಪ್ರವೇಶಿಸಿದ್ದ ಕಾರಣಕ್ಕೆ ₹ 25,000 ದಂಡ ವಿಧಿಸಲಾಗಿತ್ತು. ವಿನಯ ಎಂಬ ಹೆಸರಿನ ಆ ಮಗುವನ್ನು ಸಮಾಜ ಕಲ್ಯಾಣ ಇಲಾಖೆ ದತ್ತು ಪಡೆದಿದೆ. ಅದೇ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಬಜೆಟ್‌ನಲ್ಲಿ ‘ವಿನಯ ಸಾಮರಸ್ಯ’ ಎಂಬ ಯೋಜನೆ ಪ್ರಕಟಿಸಲಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲೇ ವಿನಯ ಸಾಮರಸ್ಯ ಯೋಜನೆಗೆ ಚಾಲನೆ ನೀಡುವರು. ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡುವರು. ಈ ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ಸಂಸದರು, ಶಾಸಕರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಒಂದು ಲಕ್ಷ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.