ADVERTISEMENT

ಜೈಲಿನಲ್ಲಿ ಮುರುಘರಿಗೆ ವಿಶೇಷ ಆತಿಥ್ಯ: ಕ್ರಮಕ್ಕೆ ಹೈಕೋರ್ಟ್‌ ಸಿಜೆಗೆ ಮನವಿ

ಕ್ರಮಕ್ಕಾಗಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 21:49 IST
Last Updated 3 ನವೆಂಬರ್ 2022, 21:49 IST
ಶಿವಮೂರ್ತಿ ಮುರುಘಾ ಶರಣ
ಶಿವಮೂರ್ತಿ ಮುರುಘಾ ಶರಣ   

ಬೆಂಗಳೂರು: ‘ತಮ್ಮದೇ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಲವು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ(ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ) ಮತ್ತುಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಆರೋಪದಡಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದ್ದು, ಈ ಸಂಬಂಧ ಚಿತ್ರದುರ್ಗ ಬಂದಿಖಾನೆಯ ಸೂಪರಿಂಟೆಂಡೆಂಟ್‌ ವಿರುದ್ಧ ಸೂಕ್ತ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕು‘ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆ) ಮನವಿ ಮಾಡಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಈ ಕುರಿತಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದು, ಚಿತ್ರದುರ್ಗ ಬಂದಿಖಾನೆಯ ಸೂಪರಿಂಟೆಂಡೆಂಟ್‌ ಅವರು ಜೈಲು ಕೈಪಿಡಿ ಉಲ್ಲಂಘಿಸಿರುವ ಬಗ್ಗೆ ಅಧಿಕೃತ ವಿವರಗಳನ್ನು ಒದಗಿಸಿದ್ದಾರೆ.

ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಚಿತ್ರದುರ್ಗ ಜಿಲ್ಲಾ ಜೈಲು ಸೂಪರಿಂಟೆಂಡೆಂಟ್‌ ಅವರಿಂದ ಪಡೆದಿರುವ ದಾಖಲೆಗಳ ಅನುಸಾರ ಮುರುಘಾ ಶ್ರೀಗಳನ್ನು (ಕೈದಿ ನಂಬರ್‌ 2611) 2022ರ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 29ರ ಮಧ್ಯದ 23 ದಿನಗಳ ಅವಧಿಯಲ್ಲಿ ಮುರುಘಾಮಠದ ಹಂಗಾಮಿ ಆಡಳಿತಾಧಿಕಾರಿ ಎಸ್‌.ಬಿ.ವಸ್ತ್ರದಮಠ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಬಸವ ಮಾಚಿದೇವ ಸ್ವಾಮಿ, ಬಸವ ಶಾಂತಲಿಂಗ ಸ್ವಾಮಿ ಸೇರಿದಂತೆಒಟ್ಟು 20 ಜನರು ಭೇಟಿ ಮಾಡಿದ್ದಾರೆ.

ADVERTISEMENT

‘ಭಾರತದಲ್ಲಿನ ಜೈಲುಗಳ ನಿರ್ವಹಣೆ ನಿಟ್ಟಿನಲ್ಲಿ ಸೂಪರಿಂಟೆಂಡೆಂಟ್‌ಗಳಿಗಾಗಿ 2003ರಲ್ಲಿ ರೂಪಿಸಲಾಗಿರುವ ಮಾದರಿ ಜೈಲು ಕೈಪಿಡಿ ಅನುಸಾರ ಕೈದಿಗಳ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಮತ್ತು ಕಾನೂನು ಸಲಹೆಗಾರರು ಹದಿನೈದು ದಿನಗಳಲ್ಲಿ ಒಮ್ಮೆ ಮಾತ್ರವೇ ಜೈಲಿನಲ್ಲಿ ಸಂದರ್ಶಿಸಲು ಅವಕಾಶ ಇದೆ. ಆದರೆ, ಈ ಪ್ರಕರಣದಲ್ಲಿ ಶ್ರೀಗಳನ್ನು ಬೇಕೆಂದವರು ಬೇಕೆಂದಾಗಲೆಲ್ಲಾ ನಿಯಮ ಮೀರಿ ಭೇಟಿಯಾಗಿದ್ದಾರೆ. ಇದು ಜೈಲಿನಲ್ಲಿ ಅವರಿಗೆ ವಿಶೇಷ ಆತಿಥ್ಯ ನೀಡುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ’ ಎಂದು ಮನವಿಯಲ್ಲಿ ದೂರಲಾಗಿದೆ.

ಕಾರಾಗೃಹಗಳ ಎಡಿಜಿಪಿ ಮತ್ತು ಐಜಿ ಅವರನ್ನು ಉದ್ದೇಶಿಸಿ ಬರೆಯಲಾಗಿರುವ ಈ ಮನವಿ ಪತ್ರದ ಪ್ರತಿಯನ್ನು ಸಿಜೆ ಮತ್ತು ಗೃಹ ಮಂತ್ರಿಗಳಿಗೂ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.