ಖಾಸಗಿ ಬಸ್‌ಗಳು (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬೇರೆ ರಾಜ್ಯಗಳಿಗೆ ತೆರಳುವ ಬಸ್ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ವಿಶೇಷ ರಹದಾರಿಯನ್ನು (ಸ್ಪೆಷಲ್ ಪರ್ಮಿಟ್) ಆನ್‌ಲೈನ್ ಮೂಲಕ ಇನ್ನು ಮುಂದೆ ಪಡೆಯಬಹುದು.
ಒಪ್ಪಂದದ ಮೇರೆಗೆ ಸಂಚರಿಸುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು, ಮ್ಯಾಕ್ಸಿಕ್ಯಾಬ್‌ಗಳು ಬೇರೆ ರಾಜ್ಯಗಳಿಗೆ ಹೋಗಬೇಕಿದ್ದರೆ ವಿಶೇಷ ರಹದಾರಿ ಪಡೆಯಬೇಕಿತ್ತು. ಕೇಂದ್ರೀಕೃತ ವ್ಯವಸ್ಥೆ ಇದ್ದುದರಿಂದ ಬೆಂಗಳೂರಿನ ಶಾಂತಿನಗರದಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರದಿಂದ (ಎಸ್‌ಟಿಎ) ರಹದಾರಿ ಪಡೆಯಬೇಕಿತ್ತು. ವಾಹನ ನೋಂದಣಿ ಪ್ರಮಾಣಪತ್ರದ ಪ್ರತಿ ನೀಡಿದ ಮೇಲೆ ಎಲ್ಲ ಮಾಹಿತಿಗಳನ್ನು ವಾಹನ್–1 ಸಾಫ್ಟ್‌ವೇರ್‌ನಲ್ಲಿ ಭರ್ತಿ ಮಾಡಿ ಅಧಿಕಾರಿಗಳು ರಹದಾರಿ ನೀಡುತ್ತಿದ್ದರು.
‘ವಾಹನ್–1 ಸಾಫ್ಟ್‌ವೇರ್ ಹಳೆಯ ಅಪ್ಲಿಕೇಶನ್ ಆಗಿತ್ತು. ಹಾಗಾಗಿ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಬೇಕಿತ್ತು. ಇದಕ್ಕೆ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಎಲ್ಲ ರಹದಾರಿಗಳನ್ನು ವೆಬ್ ಆಧಾರಿತ ಅಪ್ಲಿಕೇಶನ್ (ವಾಹನ್–4) ವ್ಯಾಪ್ತಿಗೆ ತರಲಾಗಿದೆ. ಇದರಿಂದ ವಿಶೇಷ ರಹದಾರಿ ಪಡೆಯುವುದೂ ಸರಳವಾಗಿದೆ. ರಹದಾರಿ ಪಡೆಯಲಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವುದೂ ಸುಲಭವಾಗಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಸುಮಾರು 10 ಸಾವಿರ ಇವೆ. ಪ್ರವಾಸಕ್ಕೆ ಸೋಮವಾರ ಬಸ್ ಬೇಕು ಎಂದು ಶನಿವಾರ ಅಥವಾ ಭಾನುವಾರ ತಿಳಿಸಿದರೆ ರಹದಾರಿ ಪಡೆದು, ಬಸ್ ಒದಗಿಸಲು ಕಷ್ಟವಾಗುತ್ತಿತ್ತು. ಈಗ 5 ನಿಮಿಷದಲ್ಲಿ ರಹದಾರಿ ಪಡೆಯಬಹುದು. ಬೆಳಿಗ್ಗೆ ಬಸ್ ಬೇಕು ಎಂದು ಪ್ರವಾಸಿಗರು ಹಿಂದಿನ ಮಧ್ಯರಾತ್ರಿ ತಿಳಿಸಿದರೂ ಈಗ ಬಸ್ ಒದಗಿಸಲು ನಾವು ತಯಾರಿದ್ದೇವೆ ’ ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದ್ದಾರೆ.
ವಿಶೇಷ ರಹದಾರಿ ಪಡೆಯುವ ವ್ಯವಸ್ಥೆ ಒಂದು ವಾರದಿಂದ ಜಾರಿಯಲ್ಲಿದೆ. ಇದು ಪ್ರಾಯೋಗಿಕ ಹಂತ. ತಾಂತ್ರಿಕ ಅಡಚಣೆಗಳು ಕಂಡು ಬಂದರೆ ಸರಿಪಡಿಸಲಾಗುವುದುಎ.ಎಂ. ಯೋಗೀಶ್, ಸಾರಿಗೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.