ADVERTISEMENT

ಚಿಲುಮೆ ಸಂಸ್ಥೆ ಪ್ರಕರಣ: ಮತದಾರರ ಸಮೀಕ್ಷೆಗೆ 500 ಸಿಬ್ಬಂದಿ

ಆರೋಪಿಗಳು, ಬಿಬಿಎಂಪಿ ಅಧಿಕಾರಿಗಳ ಹೇಳಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 20:27 IST
Last Updated 25 ನವೆಂಬರ್ 2022, 20:27 IST
ಚಿಲುಮೆ ಸಂಸ್ಥೆ ಲಾಂಛನ
ಚಿಲುಮೆ ಸಂಸ್ಥೆ ಲಾಂಛನ   

ಬೆಂಗಳೂರು: ‘ಮತದಾರರ ವೈಯಕ್ತಿಕ ಮಾಹಿತಿ ಕಲೆಹಾಕಲು ಯೋಜನೆ ರೂಪಿಸಿದ್ದ ಚಿಲುಮೆ ಸಂಸ್ಥೆ, ಈ ಕೆಲಸಕ್ಕಾಗಿ ಸುಮಾರು 500 ಸಿಬ್ಬಂದಿಯನ್ನು ಅರೆಕಾಲಿಕ ಅವಧಿಗಾಗಿ ನೇಮಿಸಿತ್ತು. ಡಿಜಿಟಲ್ ಸಮೀಕ್ಷಾ ಆ್ಯಪ್‌ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಿ, ಮತದಾರರ ಮನೆ ಮನೆಗೆ ಕಳುಹಿಸಿತ್ತು’ ಎಂಬುದು ತನಿಖೆಯಿಂದ ಹೊರಬಿದ್ದಿದೆ.

ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಸಹೋದರ ಕೆಂಪೇಗೌಡ ಅವರನ್ನು ವಿಚಾರಣೆ ನಡೆಸುತ್ತಿರುವ ಹಲಸೂರು ಗೇಟ್ ಠಾಣೆ ಪೊಲೀಸರು, ಮತದಾರರ ಮಾಹಿತಿ ಕಲೆಹಾಕುತ್ತಿದ್ದ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ಸಮೀಕ್ಷೆ ನಡೆಸಲು ಸಿಬ್ಬಂದಿಗೆ ಸಹಕಾರ ನೀಡಿದ್ದರು ಎನ್ನಲಾದ ಬಿಬಿಎಂಪಿ ಅಧಿಕಾರಿಗಳನ್ನೂ ವಿಚಾರಣೆ ನಡೆಸುತ್ತಿರುವ ಪೊಲೀಸರು, ಅವರಿಂದಲೂ ಹೇಳಿಕೆ ಪಡೆದು ಪರಿಶೀಲಿಸುತ್ತಿದ್ದಾರೆ. ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ, ಮತದಾರರ ಮಾಹಿತಿ ಕಲೆಹಾಕಲು ಸಿಬ್ಬಂದಿ ಬೇಕಾಗಿದ್ದಾರೆ’ ಎಂಬುದಾಗಿ ಜಾಹೀರಾತು ನೀಡಿದ್ದ ಆರೋಪಿಗಳು, ಯುವಜನರನ್ನು ನೇಮಿಸಿಕೊಂಡಿದ್ದರು. ಅವರಿಗೆ ದಿನದ ಲೆಕ್ಕದಲ್ಲಿ ಸಂಬಳ ನಿಗದಿ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘500 ಸಿಬ್ಬಂದಿಯ ತಂಡ ಕಟ್ಟಿದ್ದ ಆರೋಪಿಗಳು, ಮಹದೇವಪುರ, ಚಿಕ್ಕಪೇಟೆ ಹಾಗೂ ಇತರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲು ಸೂಚಿಸಿದ್ದರು. ಆಯಾ ಕ್ಷೇತ್ರದಲ್ಲಿ ಬಾಡಿಗೆಗೆ ಕಟ್ಟಡ ಪಡೆದು, ಸಿಬ್ಬಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡ ಲಾಗಿತ್ತು. ಅದುವೇ ಚಿಲುಮೆ ಸಂಸ್ಥೆಯ ಶಾಖೆಯೂ ಆಗಿತ್ತು. ಅಂಥ ಶಾಖೆಗಳ ಮೇಲೂ ದಾಳಿ ಮಾಡಿ, ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕೋಟಿ ಕೋಟಿ ಸಂಪಾದನೆ: ‘ಆರೋಪಿ ಚಿಲುಮೆ ಸಂಸ್ಥೆ ಕೆಲಸಗಳಿಂದಲೇ ಕೋಟಿ ಕೋಟಿ ಸಂಪಾದನೆ ಮಾಡಿದ್ದಾನೆ. ದತ್ತಾಂಶ ಮಾರಾಟ, ಇತರೆ ಸೇವೆಗಳ ಮೂಲಕ ಹಣ ಗಳಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಳ್ಳುತ್ತಿದ್ದಾನೆ. ಸಂಬಂಧಿತ ದಾಖಲೆಗಳಿಗಾಗಿ ಹುಡುಕಾಟ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ರಾಜಕೀಯ ಪ್ರಚಾರ, ಕಾರ್ಯಕ್ರಮಕ್ಕೆ ಜನರ ಪೂರೈಕೆ’

‘ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದ ರವಿಕುಮಾರ್, ಚುನಾವಣೆ ನಿರ್ವಹಣೆ ಹೆಸರಿನಲ್ಲಿ ಹಲವು ಸೇವೆಗಳನ್ನು ನೀಡುತ್ತಿದ್ದ. ಚುನಾವಣೆ ವೇಳೆ ಮನೆ ಮನೆ ಪ್ರಚಾರ, ರಾಜಕೀಯ ಕಾರ್ಯಕ್ರಮಗಳಿಗೆ ಜನರನ್ನು ಕಳುಹಿಸುವ ಕೆಲಸವನ್ನೂ ಮಾಡುತ್ತಿದ್ದ. ಇದಕ್ಕಾಗಿ ಸಂಬಂಧಪಟ್ಟ ರಾಜಕಾರಣಿಯಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ದ’ ಎಂದು ಮೂಲಗಳು ಹೇಳಿವೆ. ‘ರಾಜಕಾರಣಿಗಳಿಂದ ಹಣ ಪಡೆದಿರುವ ಬಗ್ಗೆ ಹೇಳಿಕೆ ನೀಡುತ್ತಿದ್ದಾನೆ. ಯಾವೆಲ್ಲ ರಾಜಕಾರಣಿ ಹಣ ನೀಡಿದ್ದರೆಂಬುದನ್ನು ದಾಖಲೆ ಸಮೇತ ಪತ್ತೆ ಮಾಡಲಾಗುತ್ತಿದೆ’ ಎಂದಿವೆ.

ಮೆಚ್ಚುವ ಪಕ್ಷದ ಮಾಹಿತಿ ಸಂಗ್ರಹ

‘ಬಿಬಿಎಂಪಿ ಅಧಿಕಾರಿಗಳು ನೇಮಿಸಿರುವ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಎಂಬುದಾಗಿ ಹೇಳಿ ಮನೆಗಳಿಗೆ ತೆರಳುತ್ತಿದ್ದ ಸಿಬ್ಬಂದಿ, ಮತದಾರರ ಹೆಸರು, ವಿಳಾಸ, ಜಾತಿ, ಉಪಜಾತಿ, ಕುಟುಂಬಸ್ಥರ ಮಾಹಿತಿ, ಮೊಬೈಲ್‌ ಸಂಖ್ಯೆ, ಬೆಂಬಲಿಸುವ ಪಕ್ಷ, ನೆಚ್ಚಿನ ರಾಜಕೀಯ ನಾಯಕ... ಹೀಗೆ ಹಲವು ಮಾಹಿತಿ ಪಡೆದಿದ್ದರು. ಅದನ್ನೇ ಆ್ಯಪ್‌ನಲ್ಲಿ ದಾಖಲಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.