ADVERTISEMENT

ಗಣಿಗಾರಿಕೆ ಗುತ್ತಿಗೆ ರದ್ದುಗೊಳಿಸಲು ಎಸ್‌. ಆರ್‌. ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:20 IST
Last Updated 8 ಸೆಪ್ಟೆಂಬರ್ 2022, 19:20 IST
   

ಧಾರವಾಡ: ‘ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುನಃ ಗಣಿಗಾರಿಕೆ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಇದನ್ನು ತಡೆಯುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದರು.

‘ಪಕ್ಕದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರೆಡ್ಡಿಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಬಳ್ಳಾರಿ ಜಿಲ್ಲೆಯು ಅಕ್ರಮ ಗಣಿಗಾರಿಕೆಯ ಆಗರವಾಗಿದೆ. ಹೀಗಾಗಿ ರೆಡ್ಡಿ ಬಳಿ ಇರುವ ಗಣಿಗಳ ಗುತ್ತಿಗೆಯನ್ನು ರದ್ದುಗೊಳಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಟಿಬಿ ಸ್ಯಾನಿಟೇರಿಯಮ್ ಬಳಿಯ ಸರ್ವೇ ನಂ. 601ರ ಪೈಕಿ 57 ಎಕರೆ ಜಮೀನು ಕಬಳಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು ಹಾಗೂ ಸಹಚರರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಭೂ ಕಬಳಿಕೆಗೆ ಅಂದಿನ ಜಿಲ್ಲಾಧಿಕಾರಿ ಶಿವಪ್ಪ, ಉಪವಿಭಾಗಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ಶಶಿಧರ ಬಗಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಶ್ರೀರಾಮುಲುಗೆ ಸಾಥ್ ನೀಡಿದ್ದಾರೆ. ಇವರೆಲ್ಲರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮುರುಘಾ ಶರಣರ ಪ್ರಕರಣದಲ್ಲಿ ಸಂಶಯಕ್ಕೆ ಎಡೆಮಾಡಿಕೊಡದಂತೆ ತನಿಖೆ ನಡೆಸಬೇಕು. ಕೆಲ ನ್ಯಾಯಾಧೀಶರು ಇಂಥ ಪ್ರಕರಣಗಳಲ್ಲಿ ವಿಚಾರಣೆಯಿಂದ ಹಿಂದೆ ಸರಿದಿದ್ದು ಕಳವಳಕಾರಿ. ಸ್ವಾಮೀಜಿಗಳು ಹಾಗೂ ರಾಜಕಾರಣಿಗಳ ಅಪವಿತ್ರ ಹಾಗೂ ಅನೈತಿಕ ಮೈತ್ರಿಯೇ ಇಂಥ ಘಟನೆಗಳಿಗೆ ಕಾರಣ’ ಎಂದು ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.