ADVERTISEMENT

‘ನರಳಾಟ ಕೇಳಿ ಜೀವವೇ ಹೋದಂತಾಯ್ತು’; ಬಚಾವಾದ ವೈದ್ಯ ಕುಟುಂಬ

ಬೆಂಗಳೂರಿಗೆ ವಾಪಸಾದ ಬಾಗಲಗುಂಟೆಯ ಸ್ನೇಹಿತರು l

ಸಂತೋಷ ಜಿಗಳಿಕೊಪ್ಪ
Published 23 ಏಪ್ರಿಲ್ 2019, 20:09 IST
Last Updated 23 ಏಪ್ರಿಲ್ 2019, 20:09 IST
ಸ್ಫೋಟದಲ್ಲಿ ಮೃತಪಟ್ಟ ಎಚ್‌.ಶಿವಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ
ಸ್ಫೋಟದಲ್ಲಿ ಮೃತಪಟ್ಟ ಎಚ್‌.ಶಿವಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ   

ಬೆಂಗಳೂರು: ‘ಐಷಾರಾಮಿ ಹೋಟೆಲ್‌ನ ಕೊಠಡಿಯಲ್ಲೆಲ್ಲ ಹೊಗೆ. ಛಿದ್ರವಾಗಿದ್ದ ದೇಹಗಳಿಂದ ಚಿಮ್ಮಿದ್ದ ರಕ್ತ ಇಡೀ ಕೊಠಡಿಯನ್ನೇ ಕೆಂಪಾಗಿಸಿತ್ತು. ಸುಟ್ಟು ಕಪ್ಪಾಗಿದ್ದ ಪೀಠೋಪಕರಣಗಳೆಲ್ಲ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿಯ ನರಳಾಟ ಹಾಗೂ ಚೀರಾಟ ಕೇಳಿ ಜೀವವೇ ಹೋದಂತಾಯಿತು. ಸ್ಫೋಟದ ಭೀಕರತೆಯನ್ನು ಕಂಡು ಹೆದರಿದ ನಾವು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋದೆವು. ವಾಪಸ್‌ ಹೋಟೆಲ್‌ನತ್ತ ಹೋಗಲೇ ಇಲ್ಲ. ಮುಂದೆ ಎಂದಿಗೂ ಹೋಗುವುದಿಲ್ಲ....’

ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ಬಾಗಲಕುಂಟೆ ನಿವಾಸಿ ಕಿಟ್ಟಿ ಅವರ ಮಾತು. ಸ್ಫೋಟದ ಗುಂಗಿನಿಂದ ಅವರು ಇನ್ನೂ ಹೊರಬಂದಿಲ್ಲ. ಸ್ನೇಹಿತರಾದ ಪ್ರವೀಣ್ ಹಾಗೂ ಮಂಜುನಾಥ್ ಜೊತೆ ಪ್ರವಾಸ ಹೋಗಿದ್ದ ಅವರು ಮಂಗಳವಾರ ಬೆಂಗಳೂರಿಗೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ‌

ಉಗ್ರರ ದುಷ್ಕೃತ್ಯ ಹೇಗಿತ್ತು? ತಾವು ಪಟ್ಟ ಪಾಡೇನು? ಎಂಬುದರ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದರು.

ADVERTISEMENT

‘ಶ್ರೀಲಂಕಾಕ್ಕೆ ಏಪ್ರಿಲ್ 19ರಂದು ಹೋಗಿದ್ದೆವು. ಶಾಂಗ್ರಿಲಾ ಹೋಟೆಲ್‌ನ ಪಕ್ಕದಲ್ಲಿದ್ದ ಮತ್ತೊಂದು ಹೋಟೆಲ್‌ನಲ್ಲಿ ನಾವು ಉಳಿದುಕೊಂಡಿದ್ದೆವು. ಮರುದಿನ ಬೆಳಿಗ್ಗೆಯಿಂದ ಸಂಜೆವರೆಗೂ ಕೊಲಂಬೊ ಸುತ್ತಾಡಿದ್ದೆವು’ ಎಂದರು.

‘ಏಪ್ರಿಲ್ 21ರಂದು ಬೆಳಿಗ್ಗೆ 8.30ರ ಸುಮಾರಿಗೆ ಹೋಟೆಲ್‌ನ ಕೊಠಡಿ ಖಾಲಿ ಮಾಡಿ ಬೇರೊಂದು ಪ್ರೇಕ್ಷಣೀಯ ಸ್ಥಳಕ್ಕೆ ಕ್ಯಾಬ್‌ನಲ್ಲಿ ಹೊರಟಿದ್ದೆವು. ಶಾಂಗ್ರಿಲಾ ಹೋಟೆಲ್‌ ಸಮೀಪದಲ್ಲೇ ಕ್ಯಾಬ್‌ ಹೊರಟಿದ್ದಾಗ ದೊಡ್ಡದೊಂದು ಶಬ್ದ ಕೇಳಿಸಿತ್ತು. ಕೆಲವೇ ನಿಮಿಷಗಳಲ್ಲಿ ಬಾಂಬ್‌ ಸ್ಫೋಟದ ಸುದ್ದಿ ಹರಡಿತು. ಅಲ್ಲಿನ ಭೀಕರತೆ ಕಂಡು ಹೆಚ್ಚು ಸಮಯ ಅಲ್ಲಿರಲು ಆಗಲಿಲ್ಲ’ ಎಂದು ಹೇಳಿದರು.

ನಾಲ್ವರು ಮುಖಂಡರ ಮೃತದೇಹ ಗುರುತಿಸಿದೆವು: ‘ಅದೇ ದಿನ ಬೆಂಗಳೂರಿನಿಂದ ಕರೆ ಮಾಡಿದ್ದ ಸ್ನೇಹಿತರು, ಸ್ಫೋಟದಲ್ಲಿ ಜೆಡಿಎಸ್ ಮುಖಂಡರು ಮೃತಪಟ್ಟಿರುವುದಾಗಿ ಹೇಳಿದ್ದರು. ಆ ಮುಖಂಡರೆಲ್ಲರ ಮುಖ ಪರಿಚಯ ನಮಗೂ ಇತ್ತು. ಆದರೆ, ಅವರು ಶ್ರೀಲಂಕಾಕ್ಕೆ ಬಂದಿದ್ದು ಗೊತ್ತಿರಲಿಲ್ಲ. ಕೂಡಲೇ ರಾಯಭಾರಿ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದೆವು.’

‘ನಾವಿದ್ದ ಸ್ಥಳಕ್ಕೆ ಬಂದಿದ್ದ ಪೊಲೀಸರು, ಬಿಗಿ ಭದ್ರತೆಯಲ್ಲಿ ನಮ್ಮನ್ನು ಕೊಲಂಬೊದ ಶವಾಗಾರಕ್ಕೆ ಕರೆದೊಯ್ದಿದ್ದರು. ಒಂದೊಂದೇ ಮೃತದೇಹಗಳನ್ನು ತೋರಿಸಿದರು. ಕ್ರಮವಾಗಿ ಲಕ್ಷ್ಮಿನಾರಾಯಣ, ಎಂ.ರಂಗಪ್ಪ, ಹನುಮಂತರಾಯಪ್ಪ ಅವರ ಶವಗಳನ್ನು ಗುರುತಿಸಿ ಸಂಬಂಧಿಕರಿಗೆ ತಿಳಿಸಿದೆವು’ ಎಂದು ಕಿಟ್ಟಿ ಹೇಳಿದರು.

‘ನಾವಿರುವುದು ಹೊರದೇಶದಲ್ಲಾಗಿದ್ದರಿಂದ ತುಂಬಾ ಭಯ ಆಗಿತ್ತು. ಆದರೆ, ಅಲ್ಲಿಯ ಪೊಲೀಸರು ನಮ್ಮನ್ನು ಸುರಕ್ಷಿತ ಸ್ಥಳದಲ್ಲಿರಿಸಿದ್ದರು. ಟಿಕೆಟ್ ಕಾಯ್ದಿರಿಸಿದ್ದ ವಿಮಾನದಲ್ಲಿ ಮಂಗಳವಾರ ಬೆಂಗಳೂರಿಗೆ ಕಳುಹಿಸಿಕೊಟ್ಟರು’ ಎಂದು ವಿವರಿಸಿದರು.

ಬಚಾವಾದ ವೈದ್ಯ ಕುಟುಂಬ: ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ನರರೋಗ ತಜ್ಞ ಡಾ. ಜಿ. ರಘುರಾಮ್ ಹಾಗೂ ಅವರ ಕುಟುಂಬದ 10 ಸದಸ್ಯರು ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿದ್ದಾರೆ.

ಬಾಂಬ್‌ ಸ್ಫೋಟದ ದಿನದಂದು ಶಾಂಗ್ರಿಲಾ ಹೋಟೆಲ್‌ ಸಮೀಪದಲ್ಲಿ ಕುಟುಂಬ ಇತ್ತು. ಸ್ಫೋಟ ಸಂಭವಿಸುತ್ತಿದ್ದಂತೆ ಅವರೆಲ್ಲ ಸುರಕ್ಷಿತ ಸ್ಥಳಕ್ಕೆ ಹೋಗಿ ಬಚಾವಾಗಿದ್ದಾರೆ.

‘ಶಾಂಗ್ರಿಲಾ ಹೋಟೆಲ್‌ಗೆ ಹೊಂದಿಕೊಂಡಿರುವ ಮತ್ತೊಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು. ಬೆಳಿಗ್ಗೆ ಬೇಗನೇ ಎದ್ದು ಶಾಂಗ್ರಿಲಾ ಹೋಟೆಲ್ ಎದುರೇ ಸುತ್ತಾಡುತ್ತಿದ್ದೆವು. ಅದೇ ವೇಳೆ ಸ್ಫೋಟದ ಸದ್ದು ಕೇಳಿಸಿತ್ತು. ಗಾಬರಿಗೊಂಡ ನಾವೆಲ್ಲ ಸುರಕ್ಷಿತ ಸ್ಥಳದತ್ತ ಓಡಿದೆವು’ ಎಂದುರಘುರಾಮ್ ತಿಳಿಸಿದರು.

‘ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಹೋಗಿ, ಭಾರತಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿದೆವು. ಅಲ್ಲಿಯ ಪೊಲೀಸರು, ನಮ್ಮನ್ನು ಸುರಕ್ಷಿತವಾಗಿ ನಿಲ್ದಾಣಕ್ಕೆ ಕರೆತಂದು ಬೆಂಗಳೂರಿಗೆ ಕಳುಹಿಸಿದರು’ ಎಂದು ನೆನೆದರು.

‘ದಯವಿಟ್ಟು ವಿಮಾನದ ವ್ಯವಸ್ಥೆ ಮಾಡಿ’

ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಗುತ್ತಿಗೆದಾರ ಎಚ್‌.ಶಿವಕುಮಾರ್ ಅವರ ಮೃತದೇಹವನ್ನು ತರಲು ಶ್ರೀಲಂಕಾಕ್ಕೆ ಹೋಗಿರುವ ಸಂಬಂಧಿ ಶಿವಕುಮಾರ್, ವಿಡಿಯೊವೊಂದನ್ನು ಚಿತ್ರೀಕರಿಸಿ ಪ್ರಧಾನ ಮಂತ್ರಿ, ವಿದೇಶಾಂಗ ಸಚಿವೆ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿದ್ದಾರೆ.

‘ಸ್ಫೋಟದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಹಸ್ತಾಂತರಿಸುವ ಸಂಬಂಧ ಸ್ಥಳೀಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡುತ್ತಿಲ್ಲ. ಇಂದು ಅಥವಾ ನಾಳೆ ಎಂದು ಸಬೂಬು ಹೇಳುತ್ತಿದೆ. ಮೃತದೇಹಗಳಿಗಾಗಿ ಬೆಂಗಳೂರಿನಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಕಾಯುತ್ತಿದ್ದಾರೆ’ ಎಂದು ವಿಡಿಯೊದಲ್ಲಿ ಶಿವಕುಮಾರ್ ಹೇಳಿದ್ದಾರೆ.

‘ಮೃತದೇಹಗಳನ್ನು ತೆಗೆದುಕೊಂಡು ಹೋಗಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ದಯವಿಟ್ಟು ಸಹಾಯ ಮಾಡಿ’ ಎಂದು ಅವರು ಪ್ರಧಾನಿ ಮತ್ತು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.

‘ಜೀವ ಉಳಿಸಿದ ಪಿಲ್ಲರ್‌’

‘ಶಾಂಗ್ರಿಲಾ ಹೋಟೆಲ್‌ನಲ್ಲಿದ್ದ ನಾವು ಮೂವರು ತಿಂಡಿ ತಿನ್ನಲು ಹೋಗಿದ್ದೆವು. ನಮ್ಮ ಪಕ್ಕದಲ್ಲೇ ಇಂಡೋನೇಷಿಯಾದ ದಂಪತಿ ಇದ್ದರು. ಅದೇ ಕೊಠಡಿಯಲ್ಲೇ ಬಾಂಬ್‌ ಸ್ಫೋಟಗೊಂಡಿತ್ತು. ದಂಪತಿ ಕಣ್ಣೆದುರೇ ಮೃತಪಟ್ಟರು. ಸ್ಫೋಟದ ಸ್ಥಳ ಹಾಗೂ ನಮ್ಮ ನಡುವೆ ಪಿಲ್ಲರ್‌ ಇದ್ದಿದ್ದರಿಂದ ಜೀವ ಉಳಿಯಿತು’ ಎಂದು ಬೆಂಗಳೂರಿನ ಉದ್ಯಮಿ ಸುರೇಂದ್ರ ಬಾಬು ತಿಳಿಸಿದರು.

ಸ್ನೇಹಿತರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದ ಅವರು ಮಂಗಳವಾರ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸು ಬಂದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಾಕಷ್ಟು ಜನ ನಮ್ಮ ಕಣ್ಣೆದುರೇ ನರಳಾಡಿ ಜೀವ ಬಿಟ್ಟರು. ಆ ದೃಶ್ಯವೇ ಭಯಾನಕವಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.