ADVERTISEMENT

ಜಾರಿ ನಿರ್ದೇಶನಾಲಯದ ದಾಳಿ ಸಮರ್ಥಿಸಿಕೊಂಡ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:29 IST
Last Updated 11 ಜೂನ್ 2025, 16:29 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಬೆಂಗಳೂರು: ‘ಪರಿಶಿಷ್ಟ ಪಂಗಡ ಜನಾಂಗದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ಚುನಾವಣೆಗೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಮತ್ತು ಶಾಸಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಸಮರ್ಥಿಸಿಕೊಂಡರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಸಿಕೊಂಡು ಲೋಕಸಭೆಗೆ  ಮತ್ತು ವಿಧಾನಸಭೆಗೆ ಆಯ್ಕೆ ಆಗಿರಬಹುದು. ಆದರೆ, ನಾಡಿನ ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ADVERTISEMENT

‘ಸಂಸದ ತುಕಾರಾಂ, ಶಾಸಕರಾದ ನಾರಾ ಭರತ್ ರೆಡ್ಡಿ, ಡಾ.ಶ್ರೀನಿವಾಸ್‌ ಮತ್ತು ಕಂಪ್ಲಿ ಗಣೇಶ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಆಗಿದೆ. ಈ ನಾಯಕರು ತಾವು ಸಾಚಾ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಈಗ ಇವರು ನಡೆಸಿದ ಅಕ್ರಮ ಬಯಲಿಗೆ ಬಂದಿದೆ’ ಎಂದು ಹೇಳಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ವಿರೋಧಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ವತಿಯಿಂದ ಪಾದಯಾತ್ರೆ ಮಾಡಿದ್ದೆವು. ಆಗ ಸಚಿವರಾಗಿದ್ದ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯ ಮಾಡಿದ್ದೆವು. ನಮ್ಮ ಪ್ರತಿಭಟನೆಗೆ ಮಣಿದು ನಾಗೇಂದ್ರ ರಾಜೀನಾಮೆ ನೀಡಿದ್ದರು’ ಎಂದು ರಾಮುಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.