ADVERTISEMENT

ಡಿಕೆಶಿ, ಸಿದ್ದರಾಮಯ್ಯ ಜೋಡೆತ್ತುಗಳಲ್ಲ: ಸಚಿವ ಬಿ.ಶ್ರೀರಾಮುಲು ಟೀಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 21:29 IST
Last Updated 7 ಮಾರ್ಚ್ 2021, 21:29 IST
ಶ್ರೀರಾಮುಲು
ಶ್ರೀರಾಮುಲು   

ಗದಗ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಜೋಡೆತ್ತು ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರು ಜೋಡೆತ್ತುಗಳಲ್ಲ. ಬಯಲಿನಲ್ಲಿ ಹೊಡೆದಾಡಲು ಬಿಟ್ಟಿರುವ ಹೋರಿಗಳು. ಅವರನ್ನು ಎದುರಿಸುವ ಶಕ್ತಿ ಬಿಜೆಪಿಗೆ ಇದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಭಾನುವಾರ ಗದುಗಿನಲ್ಲಿ ‌ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಒಂದು ದೇಶ ಒಂದು ಚುನಾವಣೆ’ ಎನ್ನುವುದು ದೇಶದ ಆಡಳಿತ ಹಾಗೂ ಅರ್ಥಿಕ ದೃಷ್ಟಿಯಿಂದ ಒಳ್ಳೆಯದು. ಈ ಕುರಿತು ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸುವುದನ್ನು ಬಿಟ್ಟು ಸಾಧಕ ಬಾಧಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು’ ಎಂದು ಹೇಳಿದರು.

‘ಸದನದಲ್ಲಿ ಚರ್ಚಿಸಲು ಸ್ಪೀಕರ್ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಆದರೆ, ಚರ್ಚೆ ಮಾಡದೇ ಪ್ರತಿಭಟಿಸುತ್ತಿದ್ದಾರೆ. ಚರ್ಚೆ ಅಂದರೆ ಓಡಿ ಹೋಗುವವರು ಸದನ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಯಾಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಒಂದು ದೇಶ ಒಂದು ಚುನಾವಣೆ’ ಇವತ್ತಿನದ್ದಲ್ಲ. ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೂ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಸಂಸತ್‌ವರೆಗೂ ಒಂದೇ ಚುನಾವಣೆ ಮಾಡಿದರೆ ಅದು ಆರ್‌ಎಸ್‌ಎಸ್ ಅಜೆಂಡಾ ಹೇಗಾಗುತ್ತದೆ?’ ಎಂದರು.

‘ದೇಶದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೆಯೋ, ಎಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಇದೆಯೋ ಅಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಂಗ್ರೆಸ್ ತನ್ನ ಹಳೆಯ ಚಾಳಿ ಮುಂದುವರಿಸಿದೆ. ದೇಶದಲ್ಲಿ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಆದರೆ, ಹಳೆ ಚಾಳಿ ಮುಂದುವರಿಸಿದರೆ ಜನರು ನಂಬುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.