ADVERTISEMENT

ಶಾಲಾ ಸಂಚಿತ ನಿಧಿ; ರಾಜ್ಯ ಕಚೇರಿಗೆ ಹಿಂದಿರುಗಿಸುವಂತೆ ಶಿಕ್ಷಣ ಇಲಾಖೆ ಸೂಚನೆ

ರಾಜ್ಯ ಕಚೇರಿಗೆ ಹಿಂದಿರುಗಿಸುವಂತೆ ಶಿಕ್ಷಣ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:34 IST
Last Updated 13 ಮಾರ್ಚ್ 2023, 23:34 IST
   

ಬೆಂಗಳೂರು: ಸೀಮೆಸುಣ್ಣ ಸೇರಿದಂತೆ ಶಾಲೆಯ ಸಣ್ಣಪುಟ್ಟ ಖರ್ಚುಗಳ ಮೂಲವಾದ ಶಾಲಾ ಸಂಚಿತ ನಿಧಿಯ ಹಣವನ್ನು ರಾಜ್ಯ ಕಚೇರಿಗೆ ಹಿಂದಿರುಗಿಸುವಂತೆ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸಂಚಿತ ನಿಧಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಿಂದೆ ಬಿಡುಗಡೆ ಮಾಡಿದ್ದ ಹಣದಲ್ಲಿ ಬಳಕೆಯಾಗದೆ ಉಳಿದಿರುವ ಹಣ ಹಾಗೂ ಆ ಹಣಕ್ಕೆ ಬ್ಯಾಂಕ್‌ ನೀಡಿರುವ ಬಡ್ಡಿ ಮೊತ್ತ ಒಳಗೊಂಡು ಎಲ್ಲ ಮೊತ್ತವನ್ನೂ ರಾಜ್ಯ ಕಚೇರಿಗೆ ಹಿಂದಿರುಗಿಸಬೇಕು. ಹಣ ಹಿಂದಿರುಗಿಸಿದ ನಂತರ ಶಾಲೆಯ ಖಾತೆಯಲ್ಲಿ ಯಾವುದೇ ಹಣ ಇಲ್ಲ ಎನ್ನುವುದನ್ನು ದೃಢೀಕರಿಸಬೇಕು. ಬ್ಯಾಂಕ್‌ ಪಾಸ್‌ಬುಕ್‌ನ ವಿವರ ಒಳಗೊಂಡ ಪ್ರತಿ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರಿ ಶಾಲೆಗಳ ಅಗತ್ಯಗಳಾದ ಸೀಮೆಸುಣ್ಣ, ಕಾಗದ, ವಿದ್ಯುತ್ ಬಿಲ್, ಸಣ್ಣ-ಪುಟ್ಟ ದುರಸ್ತಿ, ಹೊರಾಂಗಣ ಕ್ರೀಡಾ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಶೌಚಾಲಯ ನಿರ್ವಹಣೆ, ತುರ್ತು ಆರೋಗ್ಯದ ವೆಚ್ಚ, ಪ್ರತಿಭಾ ಕಾರಂಜಿ, ಎಸ್‌ಡಿಎಂಸಿ, ಪೋಷಕರ ಸಭೆ, ಕ್ರೀಡಾ ಕೂಟಕ್ಕೆ ಹೋಗುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆ, ನಲ್ಲಿ ದುರಸ್ತಿ, ಪ್ರಶ್ನೆ ಪತ್ರಿಕೆ ನಕಲು ಮತ್ತಿತರ ಸಣ್ಣಪುಟ್ಟ ಖರ್ಚುಗಳ ಮೂಲವೇ ಈ ಸಂಚಿತ ಖಾತೆ. ಇಂತಹ ಹಣವನ್ನು ಎಲ್ಲ ಶಾಲೆಗಳು ತಾಲ್ಲೂಕಿನ ಬಿಇಒ ಖಾತೆಗೆ, ನಂತರ ರಾಜ್ಯ ಕಚೇರಿಗೆ ಹಿಂದಿರುಗಿಸಲು ಸೂಚಿಸಲಾಗಿದೆ.

ADVERTISEMENT

ಶಿಕ್ಷಣ ಇಲಾಖೆಯ ಸುತ್ತೋಲೆಗೆ ಆಕ್ಷೇಪ: ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕರ ಆದೇಶದ ಮೇರೆಗೆ ಅಲ್ಲಿನ ಮುಖ್ಯ ಲೆಕ್ಕಾಧಿಕಾರಿ ಪತ್ರ ಬರೆದು ಶಾಲೆಗಳ ಖಾತೆಯಲ್ಲಿರುವ ಹಣ ಹಾಗೂ ಬ್ಯಾಂಕ್ ಬಡ್ಡಿಯ ಮೊತ್ತವನ್ನೂ ಒಳಗೊಂಡಂತೆ ಎಲ್ಲಾ ಅನುದಾನಗಳನ್ನು ಕೂಡಲೇ ರಾಜ್ಯ ಕಚೇರಿಗೆ ಹಿಂದಿರುಗಿಸುವಂತೆ ಸೂಚಿಸಿರುವ ಕ್ರಮವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಖಂಡಿಸಿದೆ.

ಇಂತಹ ಖಾತೆಯನ್ನೇ ಬರಿದು ಮಾಡುವುದು ಸಲ್ಲದು. ಕ್ರಮೇಣ ಸೀಮೆಸುಣ್ಣಕ್ಕೂ ಕಾಸಿಲ್ಲದಂತೆ ಮಾಡಿ, ಶಾಲೆಗಳನ್ನು ಮುಚ್ಚುವ ಹುನ್ನಾರ. ಸರ್ಕಾರ ಈ ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ವೇದಿಕೆ ಮಹಾಪೋಷಕ ವಿ.ಪಿ. ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ನಿಗದಿತ ಮೊತ್ತದಲ್ಲಿ ನೀಡಿದ್ದ ಶೇ 25
ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಂದ ಸಂಗ್ರಹಿಸುವ ದೇಣಿಗೆ ಮತ್ತಿತರ ಸರ್ಕಾರೇತರ ಶುಲ್ಕಗಳಿಂದ ಶಾಲೆಯ ಸಣ್ಣಪುಟ್ಟ ಖರ್ಚು ಭರಿಸಲಾಗುತ್ತಿತ್ತು. ಪ್ರತಿ ವರ್ಷವೂ ಖರ್ಚು ಮಾಡಿ ಉಳಿಕೆಯಾದ ಹಣ ಸಂಚಿತ ನಿಧಿ ಸೇರುತ್ತಿತ್ತು. ದೇಣಿಗೆ ಸಂಗ್ರಹಕ್ಕೆ ತಡೆ ಹಾಕಿದ ನಂತರ ಸರ್ಕಾರವೇ ಮಕ್ಕಳ ಸಂಖ್ಯೆಯ ಆಧಾರದಲ್ಲಿ ₹ 10 ಸಾವಿರದಿಂದ (ಕನಿಷ್ಠ 30 ಮಕ್ಕಳಿಗೆ) ಗರಿಷ್ಠ ₹ 1 ಲಕ್ಷದವರೆಗೆ (ಒಂದು ಸಾವಿರಕ್ಕಿಂತ ಹೆಚ್ಚು ಮಕ್ಕಳಿದ್ದರೆ) ಅನುದಾನ ನೀಡುತ್ತಿದೆ. ರಾಜ್ಯದಲ್ಲಿ 47,959 ಸರ್ಕಾರಿ ಶಾಲೆಗಳಿದ್ದು, ನಿಗದಿತ ಮೊತ್ತದಲ್ಲಿ ಪ್ರತಿ ವರ್ಷವೂ ಶೇ 25ರಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ. ಈಗ ಉಳಿದ ಹಣವನ್ನೂ ವಾಪಸ್‌ ಪಡೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.