ADVERTISEMENT

ಅಂಕ ವ್ಯತ್ಯಾಸ ತಡೆಗೆ ತಂತ್ರಾಂಶ

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ‘ಮಾರ್ಕ್‌ ಪೋರ್ಟಿಂಗ್‌’ ಸಾಫ್ಟ್‌ವೇರ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:15 IST
Last Updated 1 ನವೆಂಬರ್ 2018, 20:15 IST
   

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಡಿಜಿಟಲೀಕರಣದ ಮತ್ತೊಂದು ಹೆಜ್ಜೆ ಇಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಯಾರಿ ನಡೆಸಿದೆ.

2019ರ ಮಾರ್ಚ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನದ ಅಂಕಗಳನ್ನು ಒಎಂಆರ್‌ ಶೀಟ್‌ನ ಬದಲು ನೇರವಾಗಿ ಕಂಪ್ಯೂಟರ್‌ನಲ್ಲಿ ದಾಖಲಿಸಲು ಯೋಜಿಸಿದೆ. ಇದರಿಂದ, ಅಂಕಗಳನ್ನು ನಮೂದಿಸುವಾಗ ಉಂಟಾಗುವ ವ್ಯತ್ಯಾಸ ತಡೆಯಬಹುದಾಗಿದೆ.

ಡಿಜಿಟಲೀಕರಣ ಪ್ರಕ್ರಿಯೆ: ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಈ ಬಾರಿ ನ್ಯಾಷನಲ್‌ ಇನ್‌ಫರ್ಮೇಷನ್‌ ಸೆಂಟರ್‌ (ಎನ್‌ಐಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ‘ಮಾರ್ಕ್‌ ಪೋರ್ಟಿಂಗ್‌’ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಲಾಗಿನ್‌ ಆಗಲುಮೌಲ್ಯಮಾಪಕರಿಗೆ ಪ್ರತ್ಯೇಕ ಲಾಗಿನ್‌ ಐ.ಡಿ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಬಳಿಕ ಮೌಲ್ಯಮಾಪಕರು ಅಂಕಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಿದ್ದಾರೆ. ಬಳಿಕ ಪತ್ರಿಕೆಗಳನ್ನು ಮೌಲ್ಯಮಾಪನ ಕೇಂದ್ರದ ಉಪ ಮುಖ್ಯಸ್ಥರಿಗೆ ನೀಡಲಿದ್ದಾರೆ.

ADVERTISEMENT

ಉಪಮುಖ್ಯಸ್ಥರು ಸಹ ಗಳಿಸಿದ ಒಟ್ಟು ಅಂಕಗಳನ್ನು ತಂತ್ರಾಂಶದಲ್ಲಿ ದಾಖಲಿಸಿದ್ದಾರೆ. ಈ ಎರಡು ದಾಖಲಾತಿಗಳಲ್ಲಿ ಅಂಕಗಳು ತಾಳೆಯಾದರೆ, ಅಂಕ ಗಳಿಕೆ ಮಾಹಿತಿಯನ್ನು ಕೆಲವೇ ಸೆಕೆಂಡ್‌ಗಳಲ್ಲಿ ಕೇಂದ್ರ ಸರ್ವರ್‌ಗೆ ಕಳುಹಿಸಲಾಗುತ್ತದೆ. ವ್ಯತ್ಯಾಸ ಕಂಡುಬಂದರೆ ಕೇಂದ್ರದ ಜಂಟಿ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ದೋಷವನ್ನು ಸರಿಪಡಿಸಲಾಗುತ್ತದೆ.

ಹಿಂದೆ ಹೀಗಿತ್ತು: ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಒಟ್ಟು ಅಂಕಗಳನ್ನು ಒಎಂಆರ್‌ ಶೀಟ್‌ನಲ್ಲಿ ತುಂಬಬೇಕಿತ್ತು. ಆ ಶೀಟ್‌ಗಳನ್ನು ನಿಗದಿತ ಕೇಂದ್ರಕ್ಕೆ ಸಾಗಣೆ ಮಾಡಬೇಕಿತ್ತು. ಅಲ್ಲಿ ಪ್ರತಿಯೊಂದು ಶೀಟ್‌ ಅನ್ನು ಸ್ಕ್ಯಾನ್‌ ಮಾಡಿ, ಅಂಕಗಳನ್ನು ತಂತ್ರಾಂಶಕ್ಕೆ ತುಂಬಬೇಕಿತ್ತು.

‘ಸ್ಕ್ಯಾನಿಂಗ್‌ ಹಂತದಲ್ಲಿ ಶೀಟ್‌ನಲ್ಲಿ ತುಂಬಿದ ಅಂಕಿಗಳ ಮಾಹಿತಿ ಸರಿಯಾಗಿ ಅಪ್‌ಲೋಡ್‌ ಆಗುತ್ತಿರಲಿಲ್ಲ. ಇದರಿಂದ ಫಲಿತಾಂಶದಲ್ಲಿ ದೋಷ ಕಂಡುಬರುತ್ತಿತ್ತು. ಅದನ್ನು ಮತ್ತೆ ಸರಿಪಡಿಸಬೇಕಾಗಿತ್ತು. ಡಿಜಿಟಲೀಕರಣ ವ್ಯವಸ್ಥೆಯಿಂದ ಈ ಸಮಸ್ಯೆ ತಪ್ಪಲಿದೆ’ ಎಂದು ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದರು.

‘2018ರ ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಬರೆದ 2.6 ಲಕ್ಷ ವಿದ್ಯಾರ್ಥಿಗಳ ಪತ್ರಿಕೆಗಳ ಮೌಲ್ಯಮಾಪನಕ್ಕೆ ಈ ತಂತ್ರಾಂಶವನ್ನೇ ಪ್ರಾಯೋಗಿಕವಾಗಿ ಬಳಸಲಾಗಿತ್ತು. ಅದು ಯಶಸ್ವಿಯಾದ ಪರಿಣಾಮ, ಈ ಬಾರಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ 8.5 ಲಕ್ಷ ವಿದ್ಯಾರ್ಥಿಗಳ ಪತ್ರಿಕೆಗಳ ಮೌಲ್ಯಮಾಪನಕ್ಕೂ ಈ ವಿಧಾನ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದರು.

ಮೌಲ್ಯಮಾಪಕರಿಗೆ ಶೀಘ್ರ ಭತ್ಯೆ

ಮೌಲ್ಯಮಾಪಕರು ತಂತ್ರಾಂಶಕ್ಕೆ ಲಾಗಿನ್‌ ಆಗುವಾಗಲೇ ತಮ್ಮ ಕೋಡ್‌ ಮತ್ತು ಬ್ಯಾಂಕ್‌ ಖಾತೆ ವಿವರವನ್ನು ತುಂಬಬೇಕು. ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳಿಗೆ ನೀಡಬೇಕಾದ ಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು ನೇರವಾಗಿ ಮೌಲ್ಯಮಾಪಕರ ಖಾತೆಗೆ ರವಾನಿಸಲು ಮಂಡಳಿ ನಿರ್ಧರಿಸಿದೆ. ಇದರಿಂದ ಚೆಕ್‌ ಮೂಲಕ ಭತ್ಯೆ ನೀಡುವ ಈ ಹಿಂದಿನ ಪ್ರಕ್ರಿಯೆ ನಿಲ್ಲಲಿದೆ.

*ಡಿಜಿಟಲೀಕರಣದಿಂದಸಮಯ ಹಾಗೂಒಎಂಆರ್ ಶೀಟ್‌ ಮುದ್ರಣ, ಸ್ಕ್ಯಾನಿಂಗ್‌, ಸಾಗಣೆಗೆ ತಗಲುವಅಂದಾಜು ₹1 ಕೋಟಿ ಉಳಿತಾಯವಾಗಲಿದೆ

-ವಿ.ಸುಮಂಗಲಾ, ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.