ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹಾಜರಾತಿ ಶೇ 98.3

ಮೊದಲ ದಿನ ಸುಗಮ, ಎಲ್ಲೆಡೆ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 20:38 IST
Last Updated 25 ಜೂನ್ 2020, 20:38 IST
ಗುರುವಾರ ಬೆಂಗಳೂರಿನ ಗಿರಿನಗರದ ವಿಜಯಭಾರತೀ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆಯಲು ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿಗಳು
ಗುರುವಾರ ಬೆಂಗಳೂರಿನ ಗಿರಿನಗರದ ವಿಜಯಭಾರತೀ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆಯಲು ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿಗಳು    

ಬೆಂಗಳೂರು: ಬಹು ನಿರೀಕ್ಷೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಆರಂಭವಾಗಿದ್ದು, ಶೇ 98.3ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

‘7,85,140 ವಿದ್ಯಾರ್ಥಿಗಳ ಪೈಕಿ 13,212 ಮಂದಿ ಗೈರು ಹಾಜರಾಗಿದ್ದರು. ಕಳೆದ ವರ್ಷ ದ್ವಿತೀಯ ಭಾಷೆ ಪರೀಕ್ಷೆಯಲ್ಲಿ ಶೇ 98.7ರಷ್ಟು ಹಾಜರಾತಿ ಇತ್ತು. ರಾಜ್ಯದ ಯಾವುದೇ ಭಾಗದಲ್ಲಿ ನಕಲು ಮಾಡಿದ ಪ್ರಕರಣ ವರದಿಯಾಗಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಂಟೈನ್‌ಮೆಂಟ್‌ ಪ್ರದೇಶಗಳಿಂದ ಬಂದಿದ್ದ 998 ಮಂದಿ ಹಾಗೂ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಜ್ವರದ ಲಕ್ಷಣ ಕಾಣಿಸಿದ 201 ಮಂದಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಯಿತು. ಕೋವಿಡ್‌ ಸೋಂಕು ತಗುಲಿದ ಪ್ರದೇಶಗಳಲ್ಲಿದ್ದ ಒಟ್ಟು 28 ಪರೀಕ್ಷಾ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ 8,122 ಮಂದಿ ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಮೊದಲ ದಿನ ನಿರಾತಂಕವಾಗಿ ಪರೀಕ್ಷೆ ನಡೆದಿದ್ದು, ಮುಂದಿನ 5 ಪರೀಕ್ಷೆಗಳನ್ನು ನಡೆಸುವುದಕ್ಕೆ ಉತ್ಸಾಹ ಇಮ್ಮಡಿಸಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಒಟ್ಟು 3,212 ಬಸ್‌ಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಅಂಕಿ ಅಂಶ

13

ಕೋವಿಡ್‌ನಿಂದಾಗಿ ಗೈರು ಹಾಜರಾದವರು

7,43,688

ಪರೀಕ್ಷೆಗೆ ಹಾಜರಾದ ಹೊಸಬರು

20,892

ಹಾಜರಾದ ಖಾಸಗಿ ವಿದ್ಯಾರ್ಥಿಗಳು

555

ಹೊರರಾಜ್ಯಗಳಿಂದ ಬಂದು ಪರೀಕ್ಷೆ ಬರೆದವರು

367

ಕೇರಳದಿಂದ ಶೇ 100ರಷ್ಟು ಹಾಜರಾತಿ

12,548

ವಲಸೆ ಕಾರ್ಮಿಕರ ಮಕ್ಕಳ ಹಾಜರಾತಿ

ಕೆಲವೆಡೆ ಮಾದರಿ ಸೇವೆ

*ಶಿರಹಟ್ಟಿ ತಾಲ್ಲೂಕಿನ ಶಿಗ್ಲಿ ಪರೀಕ್ಷಾ ಕೇಂದ್ರಕ್ಕೆ ಬಸ್‌ ಸಿಗದೆ ಪರದಾಟ, ಲಕ್ಷ್ಮೇಶ್ವರ ಪೊಲೀಸರಿಂದ ತಮ್ಮ ವಾಹನದಲ್ಲೇ ತಲುಪಿಸಿ ಮಾನವೀಯತೆ

*ಗದಗ ನಗರದಲ್ಲಿ ಆಟೊ ಚಾಲಕರಿಂದ ವಿದ್ಯಾರ್ಥಿಗಳಿಗೆ ಉಚಿತ ಸೇವೆ

*ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ತಳಿರು ತೋರಣ, ವಿದ್ಯಾರ್ಥಿಗಳಿಗೆ ವಿಶಿಷ್ಟ ಗೌರವ ವಂದನೆ

*ಗೋವಾದ 2 ಶಾಲೆಗಳಲ್ಲಿ ಪರೀಕ್ಷೆಗೆ ಅವಕಾಶ. 47 ಮಂದಿಯ ಪೈಕಿ ಕೋವಿಡ್‌ನಿಂದಾಗಿ ಒಬ್ಬ ಗೈರು

ಕೆಲವು ಆತಂಕದ ಕ್ಷಣಗಳು‌

*ದೇವದುರ್ಗ ತಾಲ್ಲೂಕಿನ ಮಿಯ್ಯಾಪುರದಲ್ಲಿ ಪುತ್ರನನ್ನು ಪರೀಕ್ಷಾ ಕೇಂದ್ರಕ್ಕೆ ಕರತರುತ್ತಿದ್ದ ಶಿಕ್ಷಕನ ಬೈಕ್‌ ಎಮ್ಮೆಗೆ ಗುದ್ದಿ ಅಪಘಾತ; ಶಿಕ್ಷಕ ಸಾವು, ಪುತ್ರನಿಗೆ ಗಾಯ

*ಹಿರೇಕೆರೂರಿನ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಕಲು ಮಾಡಿಸಲು ಪ್ರಯತ್ನ, ನಾಲ್ವರು ಶಿಕ್ಷಕರು ಸಹಿತ ಐವರ ಬಂಧನ

*ಚಾಮರಾಜನಗರದಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿಗೆ ಕೈತಪ್ಪಿದ ಮೊದಲ ಪರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.