ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿ, ಕೊಠಡಿಗೆ 12 ಮಕ್ಕಳು

ಎಸ್‌ಒಪಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:19 IST
Last Updated 24 ಜೂನ್ 2021, 3:19 IST
ಸುರೇಶ್ ಕುಮಾರ್
ಸುರೇಶ್ ಕುಮಾರ್   

ಬೆಂಗಳೂರು: ‘ಜುಲೈ ಮೂರನೇ ವಾರದಲ್ಲಿ ನಡೆಸಲು ಉದ್ದೇಶಿಸಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧಿಸಿದಂತೆ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಬಿಡುಗಡೆ ಮಾಡಲಾಗಿದ್ದು, ಅದರ ಆಧಾರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‌ಒಪಿಯನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳು, ಡೆಸ್ಕ್‌ಗೆ ಒಬ್ಬರಂತೆ ವಿದ್ಯಾರ್ಥಿಗಳು ಇರಬೇಕು. ವಿದ್ಯಾರ್ಥಿಗಳು ಗುಂಪುಗೂಡಲು ಅವಕಾಶ ಇಲ್ಲ. ಮನೆಯಿಂದಲೇ ನೀರಿನ ಬಾಟಲಿ ಮತ್ತು ಊಟದ ಡಬ್ಬಿ ತರಬೇಕು. ಗ್ರಾಮೀಣ ವಿಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲ್ಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಎಸ್‌ಒಪಿಯಲ್ಲಿ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಪರೀಕ್ಷೆಯ ವೇಳೆಗೆ ಒಂದು ಡೋಸ್ ಲಸಿಕೆಯಾದರೂ ಪಡೆದಿರಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಒಪಿ ಅನುಷ್ಠಾನಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರೀಕ್ಷಾ ಪೂರ್ವದಲ್ಲಿ ಜಿಲ್ಲಾಧಿಕಾರಿ, ಸಿಇಒ ಮತ್ತು ಎಸ್‌ಪಿ ಪರಿಶೀಲಿಸಬೇಕು’ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಪರೀಕ್ಷೆ ಆರಂಭಕ್ಕೂ ಮೊದಲು ಮತ್ತು ಪರೀಕ್ಷೆಯ ಬಳಿಕ ಸೋಂಕು ನಿವಾರಕ ದ್ರಾವಣದಿಂದ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಬರುವ ಮತ್ತು ನಿರ್ಗಮಿಸುವ ಹಾಗೂ ಕೊಠಡಿ ಪ್ರವೇಶ ಸಮಯದಲ್ಲಿ ಅಂತರ ಕಾಪಾಡಿಕೊಳ್ಳುವ ಜೊತೆ ಮಕ್ಕಳ ಕೈಗೆ ಸ್ಯಾನಿಟೈಜ್ ನೀಡಲಾಗುವುದು’ ಎಂದು ಅವರು ವಿವರಿಸಿದ್ದಾರೆ.

‘ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವಿಶೇಷ ಕೊಠಡಿ ಕಾಯ್ದಿರಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳು ಬೆಳಿಗ್ಗೆ 8.30ಕ್ಕೆ ಆರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವವರೆಗೆ ತೆರದಿರಲಿವೆ. ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳೂ ಇರಲಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿ
ಗಳಿಗೆ ಆರೋಗ್ಯ ಕೇಂದ್ರಗಳಲ್ಲೇ ಮಾಸ್ಕ್ ನೀಡಲಾಗುವುದು’ ಎಂದೂ ತಿಳಿಸಿದ್ದಾರೆ.

ತುರ್ತು ಚಿಕಿತ್ಸಾ ವಾಹನ: ‘ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ತಾಲ್ಲೂಕಿಗೊಂದು ತುರ್ತು ಚಿಕಿತ್ಸಾ ವಾಹನ ಮೀಸಲಿಡಲಾಗುವುದು. ಹೊರರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆಗಳ ದಿನ ರಾಜ್ಯದ ಗಡಿಯಲ್ಲಿ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಸ್ಥಾಪನೆ
‘ತಾಲ್ಲೂಕಿಗೊಂದು ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿ,ಕೋವಿಡ್ ದೃಢಪಟ್ಟಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುವುದು. ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಕೋವಿಡ್ ಆರೋಗ್ಯ ಕೇಂದ್ರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಈ ಕೇಂದ್ರದಲ್ಲಿ ಆಂಬುಲೆನ್ಸ್ ಕಾಯ್ದಿರಿಸಲಾಗುವುದು’ ಎಂದು ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.