ADVERTISEMENT

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಅದಲು, ಬದಲು: ಪರೀಕ್ಷೆ ಎರಡು ಗಂಟೆ ವಿಳಂಬ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:20 IST
Last Updated 1 ಜುಲೈ 2020, 16:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಜಯಪುರ: ಇಲ್ಲಿನ ದರಬಾರ್‌ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಹೊಸ ಮತ್ತು ಹಳೇ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಬದಲು, ಬದಲಾಗಿ ಗೊಂದಲ ಏರ್ಪಟ್ಟ ಪರಿಣಾಮ ಪರೀಕ್ಷೆ ಮುಗಿಯುವುದು ಎರಡು ಗಂಟೆ ವಿಳಂಬವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನ ಕುಮಾರ್‌, ದರಬಾರ್‌ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ಒಂಬತ್ತು ಹಳೇ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಇವರಿಗೆ ‘ಎ’ ವರ್ಷನ್‌ ಪ್ರಶ್ನೆ ಪತ್ರಿಕೆ ನೀಡುವ ಬದಲು ‘ಬಿ’ ವರ್ಷನ್‌ ಪ್ರಶ್ನೆ ಪತ್ರಿಕೆ ನೀಡಿದ ಪರಿಣಾಮ ಗೊಂದಲ ಉಂಟಾಗಿತ್ತು’ ಎಂದು ಹೇಳಿದರು.

‘ಪ್ರಶ್ನೆ ಪತ್ರಿಕೆ ಅದಲು, ಬದಲಾಗಿರುವುದು ಗಮನಕ್ಕೆ ಬಂದ ತಕ್ಷಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಸಮಯ ನೀಡಿ ಅವರವರಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ಬರೆಸುವ ಮೂಲಕ ಲೋಪ ಸರಿಪಡಿಸಲಾಗಿದೆ’ ಎಂದರು.

ADVERTISEMENT

‘ಪ್ರಶ್ನೆಪತ್ರಿಕೆ ಗೊಂದಲಕ್ಕೆ ಕಾರಣರಾದ ಕೊಠಡಿ ಮೇಲ್ವಿಚಾರಕರು ಮತ್ತು ಮುಖ್ಯ ಅಧೀಕ್ಷಕರಿಗೆ ನೋಟಿಸ್‌ ನೀಡಲಾಗಿದೆ. ಅವರ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಒಬ್ಬ ಡಿಬಾರ್‌:

ನಕಲು ಮಾಡಲು ಯತ್ನಿಸಿದ ಆರೋಪದ ಮೇರೆಗೆ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದೆ ಎಂದರು.

2116 ವಿದ್ಯಾರ್ಥಿಗಳು ಗೈರು:

ಸಮಾಜ ವಿಜ್ಞಾನ ಪರೀಕ್ಷೆ ತೆಗೆದುಕೊಂಡಿದ್ದ 35,227 ವಿದ್ಯಾರ್ಥಿಗಳ ಪೈಕಿ 33,111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2116 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಡಿಡಿಪಿಐ ತಿಳಿಸಿದರು.

ಆಯುಕ್ತ ಭೇಟಿ:

ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು, ಬಬಲೇಶ್ವರ ಉರ್ದು ಪ್ರೌಢಶಾಲೆ, ವಿಜಯಪುರದ ಗಾಂಧಿ ಚೌಕ್‌ ಬಳಿ ಇರುವ ಸರ್ಕಾರಿ ಪ್ರೌಢಶಾಲೆ ಮತ್ತು ಬಿ.ಡಿ.ಪಾಟೀಲ ಪ್ರೌಢ ಶಾಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.