ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: 8,986 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 20:03 IST
Last Updated 19 ಜುಲೈ 2021, 20:03 IST
   

ಬೆಂಗಳೂರು: ಎಸ್ಸೆಸ್ಸೆಲ್ಸಿ ಕೋರ್ (ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ವಿಷಯಗಳ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ ಸೋಮವಾರ ನಡೆದ ಪರೀಕ್ಷೆಗೆ 8,986 ವಿದ್ಯಾರ್ಥಿ ಗಳು ಗೈರಾಗಿದ್ದಾರೆ. ಪರೀಕ್ಷೆಗೆ ಒಟ್ಟು 8,76,508 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಪರೀಕ್ಷೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ‘ಸುರಕ್ಷಿತ ವಾತಾವರಣದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ. ವಿದ್ಯಾರ್ಥಿಗಳು ಲವಲವಿಕೆಯಿಂದ ಪರೀಕ್ಷೆ ಬರೆದಿದ್ದಾರೆ. ಭಾಷಾ ವಿಷಯಗಳ ಪರೀಕ್ಷೆ ಇದೇ 22ರಂದು ನಡೆಯಲಿದೆ’ ಎಂದರು.

‘ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದಾರೆ. ಗಣಿತ ವಿಷಯಕ್ಕೆ 8,52,191 ಅಭ್ಯರ್ಥಿಗಳು ನೋಂದಾಯಿಸಿದ್ದು, 8,49,199 ಅಭ್ಯರ್ಥಿಗಳು (ಶೇ 99.64) ಹಾಜರಾದರು. ವಿಜ್ಞಾನ ವಿಷಯಕ್ಕೆ 8,43,976 ಅಭ್ಯರ್ಥಿಗಳ ಪೈಕಿ, 8,40,841 ಅಭ್ಯರ್ಥಿಗಳು, ಸಮಾಜ ವಿಜ್ಞಾನ ವಿಷಯಕ್ಕೆ 8,24,689 ಅಭ್ಯರ್ಥಿಗಳಲ್ಲಿ 8,21,823 (ಶೇ 99.65) ಮಂದಿ ಹಾಜರಾಗಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 111 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 10,693 ವಲಸೆ ವಿದ್ಯಾರ್ಥಿಗಳು ತಮಗೆ ಸಮೀಪದ ಕೇಂದ್ರಗಳಲ್ಲಿ ಹಾಜರಾದರು. 2,870 ವಿದ್ಯಾರ್ಥಿಗಳು ವಸತಿನಿಲಯಗಳಲ್ಲಿದ್ದು ಪರೀಕ್ಷೆ ಬರೆದಿದ್ದಾರೆ. ಗಡಿ ಭಾಗದ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ 770 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ’ ಎಂದರು.

ಮಂಗಳೂರು ತಾಲ್ಲೂಕಿನ ತೊಕ್ಕೊಟ್ಟು ಖಾಸಗಿ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸ‌ರ್ಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಆ ಪ್ರಯೋಗಾಲಯದ ಅಕ್ಕಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿ ಗಳನ್ನು ಅದೇ ಪರಿಸರದ ಮತ್ತೊಂದು ಶಿಕ್ಷಣ ಸಂಸ್ಥೆಯ ಕೊಠಡಿ ಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಅಭ್ಯರ್ಥಿಗಳಿಗೆ ನೀಡಲಾಯಿತು’ ಎಂದರು. ‘ಕೋಲಾರದ ಕುರುಬರ ಪೇಟೆಯ ನಿವಾಸಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 55 ವರ್ಷ ವಯಸ್ಸಿನ ವ್ಯಕ್ತಿ ಪರೀಕ್ಷೆಗೆ ಹಾಜರಾಗಿದ್ದುದು ವಿಶೇಷವಾಗಿತ್ತು. ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರಿಂದ ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು’ ಎಂದು ಸಚಿವರು ವಿವರಿಸಿದರು.

‘ಹಾವೇರಿ ಜಿಲ್ಲೆಯ ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಿದ್ದರೂ ಶಾಲೆಯ ಶಿಕ್ಷಕರೊಬ್ಬರು ಶುಲ್ಕವನ್ನು ಮಂಡಳಿಗೆ ಪಾವತಿಸದೇ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಾಗಿಲ್ಲ. ಈ ವಿದ್ಯಾರ್ಥಿಗಳೂ ಸೇರಿದಂತೆ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಆಗಸ್ಟ್‌ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.