
ಬೆಂಗಳೂರು: ‘ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಕೋಲಿ-ಕಬ್ಬಲಿಗ ಸಮಾಜದ ಮುಖಂಡರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಕೋಲಿ-ಕಬ್ಬಲಿಗ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಗುರುವಾರ ಚರ್ಚೆ ನಡೆಸಿದ ಪ್ರಿಯಾಂಕ್, ‘ಕೇಂದ್ರ ಸರ್ಕಾರ ಪ್ರಸ್ತಾವವನ್ನು ಹಿಂದಕ್ಕೆ ಕಳುಹಿಸಿರುವ ಕಾರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗುವುದು’ ಎಂದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಅವರಿಂದ ಮಾಹಿತಿ ಪಡೆದ ಪ್ರಿಯಾಂಕ್ ಅವರು, ಕೋಲಿ ಮತ್ತು ಇತರೆ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಎದುರಾಗಿರುವ ತಾಂತ್ರಿಕ ತೊಡಕುಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲು ಸೂಚಿಸಿದರು. ಸೂಕ್ತ ಮಾಹಿತಿ ಕ್ರೋಡೀಕರಿಸಿದ ಬಳಿಕ ಕೋಲಿ-ಕಬ್ಬಲಿಗ ಜನಾಂಗದ ಮುಖಂಡರ ಜೊತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು ಎಂದೂ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲಬುರಗಿ ಜಿಲ್ಲೆಯ ಶಾಸಕರಾದ ಅಲ್ಲಮಪ್ರಭು ಪಾಟೀಲ, ಖನೀಜ್ ಫಾತಿಮಾ, ಎಂ.ವೈ. ಪಾಟೀಲ, ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮತ್ತು ಕೋಲಿ ಸಮಾಜದ ಮುಖಂಡರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.