ADVERTISEMENT

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಗಲಭೆ: ಶ್ರೀಶೈಲದಲ್ಲಿ ನಿಷೇಧಾಜ್ಞೆ

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಕರ್ನಾಟಕದ ಯಾತ್ರಾರ್ಥಿಗಳು, ಸ್ಥಳೀಯರ ಜಗಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 18:43 IST
Last Updated 31 ಮಾರ್ಚ್ 2022, 18:43 IST
ಶ್ರೀಶೈಲದಲ್ಲಿ ಬುಧವಾರ ತಡ ರಾತ್ರಿ ನಡೆದ ಗಲಾಟೆಯಲ್ಲಿ ಜಖಂಗೊಂಡಿರುವ ಕರ್ನಾಟಕ ನೋಂದಣಿಯ ವಾಹನ
ಶ್ರೀಶೈಲದಲ್ಲಿ ಬುಧವಾರ ತಡ ರಾತ್ರಿ ನಡೆದ ಗಲಾಟೆಯಲ್ಲಿ ಜಖಂಗೊಂಡಿರುವ ಕರ್ನಾಟಕ ನೋಂದಣಿಯ ವಾಹನ   

ಬಾಗಲಕೋಟೆ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀಶೈಲದಲ್ಲಿ ನೀರಿನ ಬಾಟಲ್‌ ಬೆಲೆ ವಿಚಾರವಾಗಿ, ಕರ್ನಾಟಕದಿಂದ ತೆರಳಿದ್ದ ಯಾತ್ರಾರ್ಥಿಗಳು ಮತ್ತು ಸ್ಥಳೀಯ ವ್ಯಾಪಾರಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ‘ಘಟನೆಯಲ್ಲಿ ಕರ್ನಾಟಕದ ಇಬ್ಬರಿಗೆ ಗಾಯಗಳಾಗಿವೆ’ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿಸುಧೀರ್‌ಕುಮಾರ ರೆಡ್ಡಿ ಹೇಳಿದ್ದಾರೆ.

ಬುಧವಾರ ತಡರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ.ಗಲಭೆಯ ವೇಳೆ ಸ್ಥಳೀಯ ಅಂಗಡಿಗಳ ಮೇಲೂ ದಾಳಿ ನಡೆದಿದೆ.ಘರ್ಷಣೆಯಲ್ಲಿ ಕರ್ನಾಟಕ ನೋಂದಣಿಯ 200ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಲಾಗಿದೆ. ಪೊಲೀಸ್ ಬ್ಯಾರಿಕೇಡ್‌ಗೆ ಬೆಂಕಿ ಹಚ್ಚಲಾಗಿದೆ. ವಾಹನಗಳಿಗೆ ಕಟ್ಟಲಾಗಿದ್ದ ಕರ್ನಾಟಕದ ಧ್ವಜ ಕಿತ್ತು ಸುಟ್ಟುಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಲಾಟೆ ಆರಂಭವಾದಾಗ ಬೆರಳೆಣಿಕೆಯಷ್ಟು ಪೊಲೀಸರು, ಗೃಹ ರಕ್ಷಕದಳದವರು ಸ್ಥಳದಲ್ಲಿದ್ದರು. ನಂತರ ಹೆಚ್ಚಿನ ಪೊಲೀಸರನ್ನು ಕರೆಸಲಾಯಿತು.
ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. 144 ಸೆಕ್ಷನ್ ಅಡಿ ನಿಷೇಧಾಜ್ಙೆ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

‘ಕರ್ನಾಟಕದಿಂದ ತೆರಳಿದ್ದ ಪಾದಯಾತ್ರಿಗಳು ಹಾಗೂ ಸ್ಥಳೀಯರ ನಡುವೆಶ್ರೀಶೈಲದ ಪಾತಾಳಗಂಗೆಗೆ ಹೋಗುವ ರಸ್ತೆಯಲ್ಲಿರುವ ಪಾದಗಟ್ಟೆ ಬಳಿಘರ್ಷಣೆ ನಡೆದಿದೆ.ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲ್‌ ಮಾರಾಟ ಮಾಡುತ್ತಿರುವುದನ್ನು, ಪಾದಯಾತ್ರೆಯಲ್ಲಿದ್ದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ, ಕಾರು ಚಾಲಕ ಶ್ರೀಶೈಲ ವಾರಿಮಠ ಅವರು ಪ್ರಶ್ನಿಸಿದ್ದು ಗಲಾಟೆಗೆ ಕಾರಣವಾಗಿದೆ.ಈ ವೇಳೆ ಅಂಗಡಿಯವರು ಮಚ್ಚಿನಿಂದ ವಾರಿಮಠ ಮೇಲೆ ಹಲ್ಲೆ ಮಾಡಿದ್ದಾರೆ. ವಾರಿಮಠ ಅವರನ್ನು ಬಿಡಿಸಲು ಹೋದ ಹುನಗುಂದ ತಾಲ್ಲೂಕು ಅಮೀನಗಡದ ಪಾದಯಾತ್ರಿ ಗೋಪಾಲ ರುದ್ರಪ್ಪ ಅವರಿಗೂ ಏಟು ಬಿದ್ದಿದೆ. ಇದಕ್ಕೆ ಕರ್ನಾಟಕದ ಯಾತ್ರಿಕರು ಪ್ರತಿರೋಧ ತೋರಿದಾಗ ಇಡೀ ಪಟ್ಟಣಕ್ಕೆ ಗಲಭೆ ವ್ಯಾಪಿಸಿತು’ ಎಂದು ಪ್ರತ್ಯಕ್ಷದರ್ಶಿ, ಬಾಗಲಕೋಟೆಯ ಅಕ್ಷಯ ಹೋಟೆಲ್ ವ್ಯವಸ್ಥಾಪಕ ದೇವೇಂದ್ರ ಬಸಾಕಳಿ ಮಾಹಿತಿ ನೀಡಿದ್ದಾರೆ.

ADVERTISEMENT

‘ದೇವಸ್ಥಾನದ ಸಮೀಪದ ವಾಸವಿ ಛತ್ರದಲ್ಲಿ ಕರ್ನಾಟಕದಿಂದ ಬಂದಿರುವ 400ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದೇವೆ. ರಾತ್ರಿ ಬೆತ್ತ ಹಿಡಿದ ಗುಂಪುಗಳು ಕನ್ನಡದವರನ್ನು ಹುಡುಕಿ ಒದೆಯುತ್ತಿದರು.
ಈ ವೇಳೆ ಛತ್ರದವರು ಮುಖ್ಯ ಬಾಗಿಲು ಬಂದ್ ಮಾಡಿ ನಮಗೆ ರಕ್ಷಣೆ ನೀಡಿದರು. ಊಟ, ತಿಂಡಿಗೆ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಆತಂಕದಲ್ಲೇ ಕಾಲ ಕಳೆಯುತ್ತಿದ್ದೇವೆ’ ಎಂದು ಹುನಗುಂದ ತಾಲ್ಲೂಕಿನ ಚಿತ್ತವಾಡಗಿಯ ಯಾತ್ರಿ ಸಂಗಮೇಶ ಹೂಗಾರ ಅಳಲು ತೋಡಿಕೊಂಡಿದ್ದಾರೆ.

ಹೈದರಾಬಾದ್ ವರದಿ: ಪಾದಗಟ್ಟೆ ಬಳಿಯ ಅಂಗಡಿಯೊಂದರ ಬಳಿ ಯಾತ್ರಾರ್ಥಿಗಳು ನೀರಿನ ಬಾಟಲ್‌ ವಿಚಾರಕ್ಕೆ ಗಲಾಟೆ ಆರಂಭಿಸಿದರು. ನಂತರ ಅಂಗಡಿಯಾತನನ್ನು ಅವರೇ ಮೊದಲು ಥಳಿಸಿದ್ದಾರೆ. ನಂತರ ಗಲಭೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.