ADVERTISEMENT

ನೋಂದಣಿ: ನಕಲಿ ತಡೆಗೆ ತಮಿಳುನಾಡು ಮಾದರಿ- ಮುದ್ರಾಂಕ ಆಯುಕ್ತರ ಪ್ರಸ್ತಾಪ

ಕಾಯ್ದೆ ತಿದ್ದುಪಡಿಗೆ ನೋಂದಣಿ ಮತ್ತು ಮುದ್ರಾಂಕ ಆಯುಕ್ತರಿಂದ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 17:05 IST
Last Updated 8 ಫೆಬ್ರುವರಿ 2023, 17:05 IST
   

ಬೆಂಗಳೂರು: ನಕಲಿ ದಾಖಲೆಗಳನ್ನು ಬಳಸಿಕೊಂಡು ಸ್ಥಿರಾಸ್ತಿಗಳ ನೋಂದಣಿ ಮಾಡಿಸಿ ಪರರ ಆಸ್ತಿಗಳನ್ನು ಕಬಳಿಸುವವರನ್ನು ನಿಯಂತ್ರಿಸುವುದಕ್ಕಾಗಿ ತಮಿಳುನಾಡು ಮಾದರಿಯಲ್ಲಿ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವಂತೆ ನೋಂದಣಿ ಮತ್ತು ಮುದ್ರಾಂಕ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಒಬ್ಬರ ಆಸ್ತಿಯನ್ನು ಬೇರೊಬ್ಬರು ನಕಲಿ ದಾಖಲೆಗಳನ್ನು ಬಳಸಿಕೊಂಡು ನೋಂದಣಿ ಮಾಡಿಸಿಕೊಂಡರೆ ಅಥವಾ ಸರ್ಕಾರಿ ಆಸ್ತಿಗಳನ್ನು ಪರಭಾರೆ ಮಾಡಿದರೆ ನೋಂದಣಿ ರದ್ದುಪಡಿಸಲು ನ್ಯಾಯಾಲಯದ ಮೊರೆಹೋಗಬೇಕಿದೆ. ತಮಿಳುನಾಡು ಸರ್ಕಾರವು ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು, ಅಂತಹ ನೋಂದಣಿಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೀಡಿದೆ. ಅದೇ ಮಾದರಿ ಅನುಸರಿಸಲು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ ಮುಂದಾಗಿದೆ.

ಕಂದಾಯ ಸಚಿವ ಆರ್‌. ಅಶೋಕ ಅವರಿಗೆ ಪ್ರಸ್ತಾವ ಸಲ್ಲಿಸಿರುವ ನೋಂದಣಿ ಮತ್ತು ಮುದ್ರಾಂಕ ಆಯುಕ್ತೆ ಬಿ.ಆರ್‌. ಮಮತಾ, ‘ನಕಲಿ ದಾಖಲೆಗಳ ಆಧಾರದಲ್ಲಿ ನಡೆಯುವ ನೋಂದಣಿಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಬೇಕು. ಈ ರೀತಿಯ ಪ್ರಕರಣಗಳಲ್ಲಿ ಶಾಮೀಲಾದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವುದಕ್ಕೂ ಅವಕಾಶ ಕಲ್ಪಿಸಲು ನೋಂದಣಿ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಕೋರಿದ್ದಾರೆ.

ADVERTISEMENT

ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಸ್ತಾವವನ್ನು ಪರಿಶೀಲಿಸಿದ್ದು, ಕಾಯ್ದೆ ತಿದ್ದುಪಡಿ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಮತಾ, ‘ತಮಿಳುನಾಡಿನಲ್ಲಿ ನೋಂದಣಿ ಕಾಯ್ದೆ ತಿದ್ದುಪಡಿ ಬಳಿಕ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಸ್ತಿ ಲಪಟಾಯಿಸುವ ಪ್ರಕರಣಗಳು ಕಡಿಮೆಯಾಗಿವೆ. ಅದೇ ಮಾದರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದರೆ ರಾಜ್ಯದಲ್ಲೂ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಅದಕ್ಕೆ ಪೂರಕವಾಗಿ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.