ADVERTISEMENT

ಫ್ಲಾಟ್‌ ನೋಂದಣಿ: ಮುದ್ರಾಂಕ ಶುಲ್ಕ ಇಳಿಕೆ

₹35 ಲಕ್ಷ ಮೌಲ್ಯದೊಳಗಿನ ಫ್ಲಾಟ್ ಖರೀದಿದಾರರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 26 ಮೇ 2020, 19:46 IST
Last Updated 26 ಮೇ 2020, 19:46 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಕೋವಿಡ್‌–19ನಿಂದ ಸರ್ಕಾರದ ಆದಾಯವೇ ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಗ್ರಹಣೆ ಹೆಚ್ಚಿಸುವ ಜತೆಗೆ ಬಡ– ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಲು ರಾಜ್ಯ ಸರ್ಕಾರ ಫ್ಲಾಟ್‌ಗಳ ನೋಂದಣಿ ಮುದ್ರಾಂಕ ಶುಲ್ಕ ಇಳಿಸಲು ತೀರ್ಮನಿಸಿದೆ.

₹20 ಲಕ್ಷ ಮೌಲ್ಯದ ಫ್ಲಾಟ್‌ನ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 2 ಕ್ಕೆ,₹35 ಲಕ್ಷ ಮೌಲ್ಯದವರೆಗಿನ ಫ್ಲಾಟ್‌ನ‌ ಮೊದಲ ನೋಂದಣಿಯ ಶುಲ್ಕ ಶೇ 5 ರಿಂದ 3 ಕ್ಕೆ ಇಳಿಕೆಯಾಗಲಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, ‘ಮುದ್ರಾಂಕ ಶುಲ್ಕ ಇಳಿಸುವ ಕುರಿತು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದು ಅವರು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಎಷ್ಟು ಜನರಿಗೆ ಇದರಿಂದ ಪ್ರಯೋಜನ ಆಗುತ್ತದೆ. ಸರ್ಕಾರಕ್ಕೆ ಎಷ್ಟು ಆದಾಯ ಸಂಗ್ರಹ ಆಗುತ್ತದೆ ಎಂಬುದನ್ನು ಅಂದಾಜು ಮಾಡಿ ಕೆಲವೇ ದಿನಗಳಲ್ಲಿ ಜಾರಿ ಮಾಡುತ್ತೇವೆ’ ಎಂದರು.

ಕೋವಿಡ್‌–19 ಹಿನ್ನೆಲೆಯಲ್ಲಿ 2020–21 ನೇ ಸಾಲಿನಲ್ಲಿ ನೋಂದಣಿ ಮತ್ತು ಇಲಾಖೆಯ ರಾಜಸ್ವ ಸಂಗ್ರಹದಲ್ಲಿ ₹3,524 ಕೋಟಿಗಳಷ್ಟು ಕಡಿಮೆ ಆಗಬಹುದು ಎಂದು ಸಭೆ ಅಂದಾಜು ಮಾಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ವತಿಯಿಂದ ನಡೆಯುವ ಸಾಮೂಹಿಕ ವಿವಾಹ ಸ್ಥಗಿತಗೊಂಡಿತ್ತು. ಮತ್ತೆ ಅದಕ್ಕೆ ಮರು ಚಾಲನೆ ನೀಡಲು ತೀರ್ಮಾನಿಸಿದ್ದು, 50 ಜನರಿಗೆ ಸೀಮಿತಗೊಳಿಸಿ ಸರಳ ವಿವಾಹ ನಡೆಸಲು ಯಡಿಯೂರಪ್ಪ ಸೂಚನೆ ನೀಡಿದರು.

ಪ್ರಮುಖ ತೀರ್ಮಾನಗಳು:

* ತಿರುಪತಿ ತಿರುಮಲದಲ್ಲಿ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳದಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ₹200 ಕೋಟಿ ಅನುದಾನ ನೀಡಲು ಒಪ್ಪಿಗೆ. ದಾನಿಗಳ ಹೆಸರಿನಲ್ಲೂ ಕೊಠಡಿ ನಿರ್ಮಾಣ.

* 50 ದೇವಸ್ಥಾನಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಮೂಲಕ ವಿವಿಧ ಸೇವೆಗಳನ್ನು ನಡೆಸಲು ಮತ್ತು ಪ್ರಸಾದ ತರಿಸಿಕೊಳ್ಳಲು ಅವಕಾಶ. ಹೊಸ ಆ್ಯಪ್‌ ಮೂಲಕ ಇ–ಕಾಣಿಕೆ ಮತ್ತು ಸೇವೆಗಳ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಸಬಹುದು

* ಬಸವಣ್ಣನವರ ಜನ್ಮಸ್ಥಳದಲ್ಲಿ ಅನುಭವ ಮಂಟಪ ಸ್ಥಾಪನೆಗೆ ₹100 ಕೋಟಿ.

* 164 ತಾಲ್ಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚನೆ

* ಡ್ರೋನ್ ಆಧರಿಸಿದ ಸರ್ವೇ ನಡೆಸಿದ್ದು, ‘ಸಮಿತ್ವ’ ಯೋಜನೆಯಡಿ 16,000 ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸ ಸ್ಥಳದ ಆಸ್ತಿ ಪತ್ರ ವಿತರಣೆ.

ಜೂನ್‌ 1: ತೆರೆಯಲಿವೆ ದೇವಸ್ಥಾನ

ಜೂನ್‌ 1 ರಿಂದ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನಡೆಸಲು ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಲಾಕ್‌ಡೌನ್‌ ಬಳಿಕ ಎಲ್ಲ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ‘ದೇವಸ್ಥಾನ ಬಾಗಿಲು ತೆರೆದ ಮೇಲೆ ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಜಾತ್ರೆಗಳು, ಭಾರಿ ಸಂಖ್ಯೆಯಲ್ಲಿ ಸೇರಿ ಹೋಮ–ಹವನ ನಡೆಸಲು ಅವಕಾಶ ಇರುವುದಿಲ್ಲ. ಈ ಸಂಬಂಧ ಮಾರ್ಗಸೂಚಿ ಸದ್ಯವೇ ಬಿಡುಗಡೆ ಮಾಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.