ADVERTISEMENT

ಸಂತೋಷ ಆತ್ಮಹತ್ಯೆ: ಆರಂಭದಲ್ಲೇ ಮುಗ್ಗರಿಸಿದ ಬಿಜೆಪಿ ಚುನಾವಣಾ ಯಾತ್ರೆ

ಕಮಲ ನಾಯಕರು ವಿಲವಿಲ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 19:30 IST
Last Updated 13 ಏಪ್ರಿಲ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಒಂದು ವರ್ಷ ಮೊದಲೇ ವಿಧಾನಸಭಾ ಚುನಾವಣಾ ತಯಾರಿಯನ್ನು ಆರಂಭಿಸುವ ಬಿಜೆಪಿಯ ಪ್ರಯತ್ನಕ್ಕೆ ಮೊದಲ ಹೆಜ್ಜೆಯಲ್ಲೇ ಹಿನ್ನಡೆಯಾಗಿದೆ. ಪಕ್ಷ ಸಂಘಟನೆಗಾಗಿ ಬಿಜೆಪಿ ನಾಯಕರು ಆರಂಭಿಸಿದ್ದ ವಿಭಾಗವಾರು ಯಾತ್ರೆಯ ಹುಮ್ಮಸ್ಸನ್ನು ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ ಕಿತ್ತುಕೊಂಡಿದೆ.

ಹಿಂದೆ ಹಲವು ರಾಜ್ಯಗಳಲ್ಲಿ ವರ್ಷಕ್ಕೂ ಮೊದಲು ಚುನಾವಣಾ ತಯಾರಿ ಆರಂಭಿಸಿ ಯಶಸ್ಸು ಕಂಡಿರುವ ಬಿಜೆಪಿ, ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲು ನಿರ್ಧರಿಸಿದೆ. ಅದರ ಭಾಗವಾಗಿಯೇ ಪಕ್ಷದ ಎಲ್ಲ ಪ್ರಮುಖ ನಾಯಕರನ್ನೂ ಒಳಗೊಂಡ ತಂಡಗಳನ್ನು ರಚಿಸಿ, ವಿಭಾಗವಾರು ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಮೈಸೂರು, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಮಂಗಳವಾರ ಹಾಗೂ ಬುಧವಾರ ಆಯಾ ವಿಭಾಗಗಳ ಜಿಲ್ಲಾ ಮಟ್ಟದ ಪ್ರತ್ಯೇಕ ಸಭೆಗಳನ್ನು ನಿಗದಿಪಡಿಸಲಾಗಿತ್ತು. ಮಂಗಳವಾರ ಬಿಜೆಪಿ ನಾಯಕರ ಸಭೆ ಆರಂಭವಾಗುವ ಹೊತ್ತಿನಲ್ಲೇ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಯ ಸುದ್ದಿಯೂ ಬರಸಿಡಿಲಿನಂತೆ ಅಪ್ಪಳಿಸಿತು.

ADVERTISEMENT

ಮೂರೂ ಕಡೆಗಳಲ್ಲಿ ಬಿಜೆಪಿ ನಾಯಕರ ಸಭೆ ನಡೆಯುತ್ತಿದ್ದ ಹೋಟೆಲ್‌ಗಳ ಮುಂಭಾಗದಲ್ಲೇ ಕಾಂಗ್ರೆಸ್‌, ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ವಿಭಾಗದ ಸಭೆಯಲ್ಲಿದ್ದ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧವೇ ಮೃತ ಗುತ್ತಿಗೆದಾರ ಸಂತೋಷ್‌ ಪಾಟೀಲ ಆರೋಪ ಮಾಡಿರುವುದು ಬಿಜೆಪಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪಕ್ಷದ ಸಂಘಟನೆಗಿಂತಲೂ ಹೆಚ್ಚಾಗಿ ಗುತ್ತಿಗೆದಾರನ ಸಾವಿನ ಪ್ರಕರಣದ ಕುರಿತೇ ಹೆಚ್ಚು ಚರ್ಚೆ ನಡೆಸಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿತು.

ವಿಭಾಗವಾರು ಸಭೆಗಳಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರು ಮತ್ತು ಸಚಿವರು ಮೊದಲ ದಿನ ಈಶ್ವರಪ್ಪ ಅವರನ್ನು ಸಮರ್ಥಿಸಿ ಹೇಳಿಕೆ ನೀಡುವುದಕ್ಕೆ ಬಹುತೇಕ ಸಮಯ ಮೀಸಲಿಡಬೇಕಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸೇರಿದಂತೆ ಹಲವರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಲೇ ಇದ್ದರು.

ಎರಡನೇ ದಿನವಾದ ಬುಧವಾರವೂ ಎಲ್ಲ ಕಡೆಗಳಲ್ಲೂ ಸಂತೋಷ್‌ ಪಾಟೀಲ ಪ್ರಕರಣದ ಕುರಿತೇ ಹೆಚ್ಚು ಚರ್ಚೆಯಾಯಿತು. ಅರ್ಧ ದಿನ ಸಭೆ ನಡೆಸಿದ ನಾಯಕರು ತರಾತುರಿಯಲ್ಲೇ ಅಲ್ಲಿಂದ ನಿರ್ಗಮಿಸಿದರು. ವಿಭಾಗವಾರು ಸಭೆಗಳ ಮೂಲಕ ಜಿಲ್ಲೆ, ಮಂಡಲ, ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿಗೆ ಚಾಲನೆ ನೀಡುವ ಬಿಜೆಪಿ ವರಿಷ್ಠರ ಕನಸು ಆರಂಭದಲ್ಲೇ ಮುಗ್ಗರಿಸಿದೆ.

ಕಾರ್ಯಕಾರಿಣಿಗೂ ಕರಿನೆರಳು:

ಇದೇ 16 ಮತ್ತು 17ರಂದು ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಿಗದಿಯಾಗಿದೆ. ಗುತ್ತಿಗೆದಾರನ ಸಾವಿನ ಪ್ರಕರಣ ಅಲ್ಲಿಯವರೆಗೂ ಚರ್ಚೆಯ ಮುನ್ನೆಲೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಹಾಗೆ ಆದಲ್ಲಿ ಕಾರ್ಯಕಾರಿಣಿ ಮೇಲೂ ಈ ಪ್ರಕರಣದ ಕರಿನೆರಳು ಬೀಳಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.