ADVERTISEMENT

ನವೋದ್ಯಮ: ಸರ್ಕಾರದಿಂದ ಆರ್ಥಿಕ ನೆರವು; ಆಯ್ಕೆ ಪ್ರಕ್ರಿಯೆಯೇ ನಿಗೂಢ

₹ 50 ಲಕ್ಷ ಆರ್ಥಿಕ ನೆರವಿನ ಯೋಜನೆ ಸುತ್ತ ಸಂಶಯದ ಹುತ್ತ– ಭಾಗ–1

ಪ್ರವೀಣ ಕುಮಾರ್ ಪಿ.ವಿ.
Published 18 ಮಾರ್ಚ್ 2021, 2:14 IST
Last Updated 18 ಮಾರ್ಚ್ 2021, 2:14 IST
ಸ್ಟಾರ್ಟ್‌ಅಪ್‌–ಪ್ರಾತಿನಿಧಿಕ ಚಿತ್ರ
ಸ್ಟಾರ್ಟ್‌ಅಪ್‌–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನವೋದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಗರಿಷ್ಠ ₹ 50 ಲಕ್ಷ ಆರ್ಥಿಕ ನೆರವು ನೀಡುತ್ತಿದ್ದು, ಇದರ ಪ್ರಕ್ರಿಯೆಯೇ ಪಾರದರ್ಶಕವಾಗಿಲ್ಲ ಎಂಬ ಕೂಗು ಎದ್ದಿದೆ.

ಆಯ್ಕೆ ಪ್ರಕ್ರಿಯೆ ವೇಳೆ ಯಾವ ಸಂಸ್ಥೆಗೆ ಎಷ್ಟು ಅಂಕ ನೀಡಲಾಯಿತು ಎಂಬುದು ಸ್ವತಃ ಸ್ಪರ್ಧಿಗಳಿಗೇ ತಿಳಿಯುವುದಿಲ್ಲ.

ನವೋದ್ಯಮಗಳಿಗೆ ಉತ್ತೇಜನ ನೀಡಲೆಂದೇ ‘ಕರ್ನಾಟಕ ನವೋದ್ಯಮ ಕಾರ್ಯನೀತಿ 2015 -2020’ ರೂಪಿಸಿರುವ ರಾಜ್ಯ ಸರ್ಕಾರವು ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಇದರ ಅನುಷ್ಠಾನಕ್ಕಾಗಿ ಪ್ರತ್ಯೇಕ ಕೋಶವನ್ನೂ ಸ್ಥಾಪಿಸಿದೆ. ಇದರ ಫಲವಾಗಿ ಕರ್ನಾಟಕ ನವೋದ್ಯಮ ಸ್ನೇಹಿ ರಾಜ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ .

ADVERTISEMENT

ನವೋದ್ಯಮಗಳಿಗೆ ಆರಂಭಿಕ ಹಂತದಲ್ಲಿ ಆರ್ಥಿಕ ನೆರವು ಒದಗಿಸಲು ಪುರಾವೆ ಆಧಾರಿತ ಪರಿಕಲ್ಪನೆ ಆಶಯದಡಿ 'ಐಡಿಯಾ2ಪಿಒಸಿ' (ಎಲೆವೇಟ್‌) ಸ್ಪರ್ಧೆ ಏರ್ಪಡಿಸುತ್ತದೆ. ಇಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬುದು ಭಾಗವಹಿಸಿದವರ ಆರೋಪ.

'ಐಡಿಯಾ2ಪಿಒಸಿ' ಸ್ಪರ್ಧೆಯಲ್ಲಿ ಆವಿಷ್ಕಾರಗಳ ಹೊಸತನ, ಅದರಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ, ವ್ಯಾಪಾರದ ಮಾದರಿ, ತಂಡದ ಸಾಮರ್ಥ್ಯ ಹಾಗೂ ಅನುದಾನ ಹಂಚಿಕೆಯಂತಹ ಅಂಶಗಳನ್ನು ಆಧರಿಸಿ ನವೋದ್ಯಮವನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಿಗಳು ತಮ್ಮ ಕಾರ್ಯಯೋಜನೆಯನ್ನು ಸ್ವತಂತ್ರ ಮೌಲ್ಯಮಾಪಕರ ಸಮಿತಿ ಮುಂದೆ ಪ್ರಸ್ತುತಪಡಿಸಬೇಕು. ಅತಿ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾಗುವ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಇಲಾಖೆಯು 2019ರ ಮಾರ್ಚ್‌ನಲ್ಲಿ ಏರ್ಪಡಿಸಿದ್ದ ‘ಎಲೆವೇಟ್‌ 2019’ ಸ್ಪರ್ಧೆಗೆ 729 ಅರ್ಜಿಗಳು ಬಂದಿದ್ದವು. ಕೈಗಾರಿಕಾ ಸಂಘಗಳು ಮತ್ತು ಈ ಕೈಗಾರಿಕಾ ಪರಿಸರ ನಿರ್ಮಾಣದ ಪಾಲುದಾರ ಸಂಸ್ಥೆಗಳಾದ ಎಬಿಎಐ, ಟಿಐಇ, ನಾಸ್ಕಾಂ, ಐಇಎಸ್‌ಎ ಸಂಸ್ಥೆಗಳು ಶಿಫಾರಸು ಮಾಡಿದ್ದ ಮೌಲ್ಯಮಾಪಕರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು. ಅವರು ನೀಡಿದ್ದ ಅಂಕಗಳನ್ನು ಆಧರಿಸಿ 479 ನವೋದ್ಯಮಗಳು ಮೂರನೇ ಸುತ್ತಿಗೆ ಆಯ್ಕೆಯಾಗಿದ್ದವು. ಈ ಸುತ್ತಿನ ಮೌಲ್ಯಮಾಪನ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಬೆಂಗಳೂರಿನಲ್ಲಿ ನಡೆದಿದ್ದವು. ಅಂತಿಮ ಸುತ್ತಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನೂರು ನವೋದ್ಯಮಗಳನ್ನು ಆರ್ಥಿಕ ನೆರವು ನೀಡುವುದಕ್ಕೆ ಆಯ್ಕೆ ಮಾಡಲಾಗಿತ್ತು.

‘ಮೇಲ್ನೋಟಕ್ಕೆ ಈ ಎಲ್ಲ ಪ್ರಕ್ರಿಯೆ ನಿಯಮಬದ್ಧವಾಗಿಯೇ ನಡೆದಂತೆ ತೋರುತ್ತದೆ. ಆದರೆ, ಆಯ್ಕೆ ಪ್ರಕ್ರಿಯೆಯೇ ಪಾರದರ್ಶಕವಾಗಿಲ್ಲ. 300ಕ್ಕೆ 208 ಅಂಕ ಪಡೆದ ನವೋದ್ಯಮವೊಂದು ಆರ್ಥಿಕ ನೆರವು ಪಡೆದಿದೆ. ಆದರೆ, ಅದಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದ ನವೋದ್ಯಮಗಳು ಆಯ್ಕೆಯಾಗಿಲ್ಲ. ಮೌಲ್ಯಮಾಪನದ ಪ್ರತಿಗಳನ್ನಾಗಲೀ, ಅಂಕಗಳನ್ನಾಗಲೀ ಸ್ಪರ್ಧಿಗಳಿಗೆ ತೋರಿಸುವುದೇ ಇಲ್ಲ. ಇಲ್ಲಿ ಅಧಿಕಾರಿಗಳು, ಮೌಲ್ಯಮಾಪಕರು ಆಡಿದ್ದೇ ಆಟ. ನವೋದ್ಯಮವು ನಿಜಕ್ಕೂ ಅರ್ಹತೆ ಗಳಿಸಿದ್ದರೂ ‘ನೀವು ವಿಫಲರಾಗಿದ್ದೀರಿ’ ಎನ್ನುವ ಸಂದೇಶ ಕಳುಹಿಸಲಾಗುತ್ತದೆ. ತಾವು ಸೋತಿದ್ದೇಕೆ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಸ್ಪರ್ಧಿಗಳಿಗೆ ಅವಕಾಶವಿಲ್ಲ. ಈ ರೀತಿ ಗೋಪ್ಯತೆ ಕಾಯ್ದುಕೊಳ್ಳುವ ಉದ್ದೇಶವೇನು’ ಎಂದು ಪ್ರಶ್ನಿಸುವ ಮೈಸೂರಿನ ಎಂ.ಕೆ. ಪ್ರವೀಣ್‌ ಕುಮಾರ್‌, ಅದಕ್ಕೆ ತಕ್ಕ ದಾಖಲೆಗಳನ್ನೂ ಮುಂದಿಡುತ್ತಾರೆ.

‘ಹೆಚ್ಚು ಅಂಕ ಪಡೆದ ನವೋದ್ಯಮಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡಲು ಅನುಸರಿಸಿದ ಮಾನದಂಡಗಳೇನು, ಕಾರ್ಯನೀತಿಯ ಯಾವ ಅಂಶದ ಅಡಿಯಲ್ಲಿ ಈ ಮಾನದಂಡಗಳನ್ನು ನಿಗದಿಪಡಿಸಲಾಗಿದೆ, ಅಧಿಕೃತ ಸಭೆ ನಡೆಸಿ ಆ ನಿರ್ಣಯ ಅಂಗೀಕರಿಸಲಾಗಿದೆಯೇ ಎಂದು ಮಾಹಿತಿ ಹಕ್ಕಿನಡಿ ಕೇಳಿದರೆ ನೀಡುವುದೇ ಇಲ್ಲ’ ಎಂದು ಅವರು ದೂರಿದರು.

‘ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆ ಮಾಡಿದರೆ, ‘ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ’ ಎನ್ನುತ್ತಾರೆ. ವಶೀಲಿ ಬಳಸಿ ಅರ್ಹರಲ್ಲದ ನವೋದ್ಯಮಗಳಿಗೆ ಅನುಕೂಲ ಕಲ್ಪಿಸುತ್ತಿರುವುದರಿಂದ ಅರ್ಹ ಕಂಪನಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸುತ್ತಾರೆ ಇನ್ನೊಬ್ಬ ಸ್ಪರ್ಧಿ ಧಾರವಾಡದ ಪ್ರಭಾಂಜನ್‌.

‘ಅಕ್ರಮಕ್ಕೆ ಆಸ್ಪದವಿಲ್ಲ’
‘ಆರೋಪಗಳಲ್ಲಿ ಹುರುಳಿಲ್ಲ. ಐಡಿಯಾ2ಪಿಒಸಿ ಸ್ಪರ್ಧೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ. ಅತ್ಯಂತ ದಕ್ಷ ಮೌಲ್ಯಮಾಪಕರು ನವೋದ್ಯಮಗಳನ್ನು ಆಯ್ಕೆ ಮಾಡುತ್ತಾರೆ. ಮೌಲ್ಯಮಾಪನದ ಪ್ರತಿಯೊಂದು ದಾಖಲೆಗಳನ್ನೂ ನಾವು ಇಟ್ಟುಕೊಂಡಿರುತ್ತೇವೆ. ಅನುದಾನ ಲಭ್ಯತೆ ಆಧಾರದಲ್ಲಿ ನವೋದ್ಯಮಗಳಿಗೆ ಆರ್ಥಿಕ ನೆರವು ಹಂಚಿಕೆ ಮಾಡುತ್ತೇವೆ’ ಎಂದು ‘ಸ್ಟಾರ್ಟ್‌ಅಪ್‌ ಕರ್ನಾಟಕ’ದ ಮುಖ್ಯಸ್ಥೆ ಚಂಪಾ ಇ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***
ತಾವೇಕೆ ವಿಫಲರಾದೆವು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದರೆ ಅಂತಹ ನವೋದ್ಯಮಗಳು ಭವಿಷ್ಯದಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದೆ.
–ಪ್ರತಾಪ್‌ ಪರಾಶರ, ಐಡಿಯಾ2ಪಿಒಸಿ, ಸ್ಪರ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.