ADVERTISEMENT

ರೈಲ್ವೆ ಯೋಜನೆ: ಸಮನ್ವಯ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 6:44 IST
Last Updated 20 ನವೆಂಬರ್ 2022, 6:44 IST
   

ಬೆಂಗಳೂರು: ರಾಜ್ಯದಲ್ಲಿ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು, ಕರ್ನಾಟಕದಲ್ಲಿನ ರೈಲ್ವೆ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿದರು. ಶೇಕಡ 50:50ರ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಂಡಿರುವ ಒಂಬತ್ತು ಹೊಸ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಭೂಸ್ವಾಧೀನ, ಅನುದಾನ ಬಿಡುಗಡೆ, ಕಾಮಗಾರಿಗೆ ವೇಗ ನೀಡುವುದರಲ್ಲಿ ಸಮನ್ವಯ ಸಾಧಿಸಲುಉನ್ನತಮಟ್ಟದ ಸಮಿತಿ ರಚಿಸುವ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಯಿತು.

‘ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡುವುದು ಮತ್ತು ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಎದುರಾಗುವ ತೊಡಕುಗಳನ್ನು ನಿವಾರಿಸಲು ಸಮನ್ವಯ ಸಮಿತಿ ರಚಿಸಲಾಗುವುದು’ ಎಂದು ಬೊಮ್ಮಾಯಿ ತಿಳಿಸಿದರು.

ADVERTISEMENT

ಒಂಬತ್ತು ರೈಲ್ವೆ ಯೋಜನೆಗಳಿಗೆ 15ಸಾವಿರ ಎಕರೆ ಜಮೀನು ಅಗತ್ಯವಿದ್ದು, ಈವರೆಗೆ 9 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅತಿಹೆಚ್ಚಿನ ಬೇಡಿಕೆಯ ಮತ್ತು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಅಗತ್ಯವಿರುವ ಜಮೀನುಗಳನ್ನು ಆದ್ಯತೆ ಮೇಲೆ ಸ್ವಾಧೀನಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು.

ಗದಗ –ವಾಡಿ, ರಾಯದುರ್ಗ- ತುಮಕೂರು, ಗಿಣಿಗೇರಾ- ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ- ಕುಡಚಿ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ – ಬೇಲೂರು, ಶಿವಮೊಗ್ಗ–ರಾಣೆಬೆನ್ನೂರು, ಮಾರಿಕುಪ್ಪಂ-ಕುಪ್ಪಂ, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನದ ಕುರಿತೂ ಚರ್ಚೆ ನಡೆಯಿತು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಂಸದ ಎಸ್. ಮುನಿಸ್ವಾಮಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.