ADVERTISEMENT

ಭ್ರಷ್ಟಾಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಂಬರ್ ಒನ್: ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಸರಣಿ ವರದಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 6:05 IST
Last Updated 22 ಮಾರ್ಚ್ 2022, 6:05 IST
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   

ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಕುರಿತು ಪ್ರಜಾವಾಣಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದು, ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿರುವ ರಾಜ್ಯ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ‌ಮೋದಿ ಅವರು ಬಹುಮಾನ ನೀಡಬೇಕು ಎಂದು ಕರ್ನಾಟಕ ‌ಪ್ರದೇಶ ಕಾಂಗ್ರೆಸ್ ‌ಸಮಿತಿ ಅಧ್ಯಕ್ಷ ‌ಡಿ.ಕೆ. ಶಿವಕುಮಾರ್ ಕುಟುಕಿದರು.

ನಗರದಲ್ಲಿ ಪಕ್ಷದ ‌ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ರೈತರ ಹೊಲಗಳಿಗೆ ಬೋರ್ ವೆಲ್ ಕೊರೆಸುವ ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿದ್ದು, ಪಕ್ಷವು ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರ ಬಿಡುಗಡೆ ‌ಮಾಡಲಿದೆ ಎಂದರು.

ಭಗವದ್ಗೀತೆ ಅಳವಡಿಸಿದ್ದೇ ನಾವು: ರಾಜ್ಯ ಸರ್ಕಾರ ‌ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಜೆಪಿಯವರಿಗಿಂತ ಮುಂಚೆಯೇ ನಾವು ಭಗವದ್ಗೀತೆಯಲ್ಲಿನ ಉತ್ತಮ ಅಂಶಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದೇವೆ. ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರ ಆರಂಭಿಸಿದರು.‌ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ₹ 2ಕ್ಕೆ ಒಂದರಂತೆ ಭಗವದ್ಗೀತೆಯ ಪ್ರತಿಗಳನ್ನು ಹಂಚಿದರು ಎಂದು ಹೇಳುತ್ತಾ ಭಗವದ್ಗೀತೆಯಲ್ಲಿ ಯದಾ ಯದಾಹಿ ಧರ್ಮಸ್ಯ... ಶ್ಲೋಕವನ್ನು ಹೇಳಿದರು.

ADVERTISEMENT

ಭಗವದ್ಗೀತೆ ಅಷ್ಟೇ ಅಲ್ಲದೆ, ಬೈಬಲ್, ಬೌದ್ಧ ಧರ್ಮ, ಜೈನ ಧರ್ಮದ ಧರ್ಮ ಗ್ರಂಥಗಳಲ್ಲಿಯೂ ಉತ್ತಮ ಅಂಶಗಳಿವೆ. ಅವುಗಳನ್ನೂ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಏನೇ ರಾಜಕಾರಣ ಮಾಡಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಜಾರಿಗೆ ತರುವುದಾಗಿ‌ ಹೇಳಿದ್ದಾರೆ. ಕೇಂದ್ರ ಬಿಜೆಪಿಗೆ ತಮಿಳುನಾಡು, ಗೋವಾ ಬೇಕೋ ಕರ್ನಾಟಕ ಬೇಕೋ ಎಂಬುದನ್ನು ನಿರ್ಧರಿಸಲಿ. ಈ ವಿಚಾರದಲ್ಲಿ ರಾಜ್ಯದ 26 ಬಿಜೆಪಿ ಸಂಸದರು ಗಮನ ಹರಿಸಬೇಕು ಎಂದರು.

ಜಿ-23 ನಾಯಕರು ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿರುವ ಕುರಿತು ಉತ್ತರಿಸಿದ ಅವರು, ಸೋನಿಯಾ ಗಾಂಧಿ ಅವರು ತಮ್ಮ ಅತ್ತೆ, ಪತಿಯನ್ನು ಕಳೆದುಕೊಂಡಿದ್ದರಿಂದ ರಾಜಕೀಯದ ಸಹವಾಸವೇ ಬೇಡ ಎಂದಿದ್ದರು. ಪ್ರಧಾನಿ ‌ಹುದ್ದೆ ತಮ್ಮ ಬಳಿಗೇ ಬಂದಿದ್ದರೂ ಒಪ್ಪದೇ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು. ಸೋನಿಯಾ ಅವರು ಅಧ್ಯಕ್ಷರಾಗಿದ್ದಾಗಲೇ ಎರಡು ಬಾರಿ ಪಕ್ಷ ‌ಕೇಂದ್ರದಲ್ಲಿ‌ ಅಧಿಕಾರಕ್ಕೆ ಬಂದಿದ್ದನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಯಾರು‌ ಏನೇ ಹೇಳಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ‌ಗಾಂಧಿ ಅವರ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ ಎಂದರು.

ಕೆಪಿಸಿಸಿ‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.