ADVERTISEMENT

ಮದ್ಯ ಖರೀದಿ ನಿಲ್ಲಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:21 IST
Last Updated 15 ಅಕ್ಟೋಬರ್ 2020, 5:21 IST

ಬೆಂಗಳೂರು: ಆನ್‌ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ಯ ವ್ಯಾಪಾರಿಗಳು ಕರ್ನಾಟಕ ಪಾನೀಯ ನಿಗಮದಿಂದ(ಕೆಎಸ್‌ಬಿಸಿಎಲ್) ಬುಧವಾರ ಮದ್ಯ ಖರೀದಿ ಮಾಡದೆ ಪ್ರತಿಭಟನೆ ವ್ಯಕ್ತಪಡಿಸಿದರು.

‘ಆನ್‌ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡಲಾಗಿದೆ ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕು. 2011ರ ಜನಗಣತಿ ಪ್ರಕಾರ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯಿತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಮದ್ಯದ ಅಂಗಡಿ ತೆರೆಯಲು ನೀಡಿರುವ ಅನುಮತಿ ರದ್ದುಪಡಿಸಬೇಕು’ ಎಂದು ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.

‘ಹೊಸದಾಗಿ ಎಂಎಸ್‌ಐಎಲ್ ಮಳಿಗೆ ತೆರೆಯುವುದನ್ನು ನಿಲ್ಲಿಸಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಆದ ನಷ್ಟಕ್ಕೆ ಪರಿಹಾರ ಘೋಷಿಸಬೇಕು. ಲಂಚಕ್ಕಾಗಿ ಅಬಕಾರಿ ಅಧಿಕಾರಿಗಳು ನೀಡುವ ಕಿರುಕುಳ ತಪ್ಪಿಸಬೇಕು. ಕೋವಿಡ್ ಸಂದರ್ಭದಲ್ಲಿ ಹೆಚ್ಚಳ ಮಾಡಿರುವ ಅಬಕಾರಿ ಸುಂಕ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದೆ.

ADVERTISEMENT

‘ಪ್ರತಿನಿತ್ಯ 1,500ಕ್ಕೂ ಹೆಚ್ಚು ಸನ್ನದುದಾರರು ಪಾನೀಯ ನಿಗಮದಿಂದ ಮದ್ಯ ಖರೀದಿ ಮಾಡುತ್ತಿದ್ದು, ಸರಾಸರಿ 1.60 ಲಕ್ಷ ಪೆಟ್ಟಿಗೆ ಮದ್ಯ ಮತ್ತು 60 ಸಾವಿರ ಪೆಟ್ಟಿಗೆ ಬಿಯರ್ ಖರೀದಿಯಾಗುತ್ತಿದೆ. ಬುಧವಾರ 84 ಸನ್ನದುದಾರರು ಮಾತ್ರ 7,082 ಪೆಟ್ಟಿಗೆ ಮದ್ಯ ಮತ್ತು 2,532 ಪೆಟ್ಟಿಗೆ ಬಿಯರ್ ಖರೀದಿಸಿದ್ದಾರೆ. ಎಂಎಸ್‌ಐಎಲ್ ಮಳಿಗೆಯವರು ಮಾತ್ರ ಮದ್ಯ ಖರೀದಿಸಿದ್ದಾರೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.