ADVERTISEMENT

ಕಾರಾಗೃಹಗಳಲ್ಲಿ ನೇಮಕಾತಿ: ವಸ್ತುಸ್ಥಿತಿ ವರದಿ ಸಲ್ಲಿಕೆಗೆ ಹೈಕೋರ್ಟ್ ತಾಕೀತು

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 6:02 IST
Last Updated 14 ಜುಲೈ 2022, 6:02 IST
ಕಾರಾಗೃಹ (ಸಾಂದರ್ಭಿಕ ಚಿತ್ರ)
ಕಾರಾಗೃಹ (ಸಾಂದರ್ಭಿಕ ಚಿತ್ರ)   

ಬೆಂಗಳೂರು:'ರಾಜ್ಯದ ಕಾರಾಗೃಹಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮನೋರೋಗ ಚಿಕಿತ್ಸಕರ ನೇಮಕಾತಿ ಕುರಿತಂತೆ ವಸ್ತುಸ್ಥಿತಿಯ ವರದಿ ಸಲ್ಲಿಸಿ' ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ, ರಾಜ್ಯದ ಕಾರಾಗೃಹಗಳಲ್ಲಿನ ಮೂಲ ಸೌಕರ್ಯಗಳ ಕೊರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 'ಜೈಲುಗಳಲ್ಲಿನ ವೈದ್ಯಕೀಯ ಸೌಲಭ್ಯಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮನೋರೋಗ ಚಿಕಿತ್ಸಕರ ನೇಮಕಾತಿ ಬಗ್ಗೆ 2020ರಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಂಡಿಲ್ಲ' ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಸರ್ಕಾರಿ ವಕೀಲರು, 'ಜೈಲುಗಳಲ್ಲಿನ ಸುಧಾರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರ 2021ರ ಜುಲೈ 14ರಂದು ಸಲ್ಲಿಸಿರುವ ಶಿಫಾರಸುಗಳ ಅನ್ವಯ ಹಲವು ಕ್ರಮ ಕೈಗೊಂಡಿದೆ' ಎಂದರು.

ಇದಕ್ಕೂ ಮುನ್ನ ಅಮೋಲ್ ಕಾಳೆ ಪರ ವಕೀಲ ಎನ್.ಪಿ ಅಮೃತೇಶ್, 'ಜೈಲುಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಒದಗಿಸಿಲ್ಲ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ನ್ಯಾಯಪೀಠ, 'ಕಾನೂನು ಸೇವಾ ಪ್ರಾಧಿಕಾರದ ಶಿಫಾರಸುಗಳ ಅನ್ವಯ ಕೈಗೊಂಡಿರುವ ಕ್ರಮಗಳ ಜೊತೆಗೆ ಜೈಲುಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳ ಬಗೆ ಗಿನಮಾಹಿತಿಯನ್ನೂ ಸಲ್ಲಿಸಿ' ಎಂದು ಸರ್ಕಾರಿ ವಕೀಲರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.