ADVERTISEMENT

ನೌಕರರ ವರ್ಗಾವಣೆ ಅಧಿಕಾರ ಇಲಾಖೆಯ ಉಸ್ತುವಾರಿ ಹೊತ್ತ ಸಚಿವರಿಗೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 3:12 IST
Last Updated 1 ಮೇ 2022, 3:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎ, ಬಿ, ಸಿ ಮತ್ತು ಡಿ ದರ್ಜೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆಗೆ ಸರ್ಕಾರ ಚಾಲನೆ ನೀಡಿದೆ.

ವಿಧಾನಸಭೆ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಇದ್ದು, ಈ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಕೊನೆಯ ಚುನಾವಣೆ ಇದಾಗಿದೆ. ವರ್ಗಾವಣೆಯ ಅಧಿಕಾರವನ್ನು ಇಲಾಖೆಯ ಉಸ್ತುವಾರಿ ಹೊತ್ತ ಸಚಿವರಿಗೆ ನೀಡಲಾಗಿದೆ.

ಮೇ 1ರಿಂದ (ಭಾನುವಾರ) ಜೂನ್‌ 15ರವರೆಗೂ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಆಯಾ ಇಲಾಖೆಗಳ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಒಟ್ಟು ಸಂಖ್ಯೆಯಲ್ಲಿ ಶೇ 6ರಷ್ಟು ಮಂದಿಯನ್ನು ಮಾತ್ರ ವರ್ಗಾವಣೆ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 2013ರ ಜೂನ್‌ 7ರಂದು ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಇರುವ ಇತರ ಅಂಶಗಳು ಈ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಉ್ಲಲೇಖಿಸಲಾಗಿದೆ. ಈ ಮಾರ್ಗಸೂಚಿ ಪ್ರಕಾರ, ಆಯಾ ನೇಮಕಾತಿ ಪ್ರಾಧಿಕಾರಗಳೇ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಮಾಡಬೇಕಿತ್ತು. ಈ ಅಧಿಕಾರವನ್ನು ಸಚಿವರಿಗೆ ಪ್ರತ್ಯಾಯೋಜನೆ ಮಾಡಲಾಗಿದೆ.

ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಿಂತೆ 2013ರಲ್ಲಿ ಮಾರ್ಗಸೂಚಿ ಹೊರಡಿಸಲಾಗಿತ್ತು. ಅದರ ಪ್ರಕಾರ, ನಿರ್ದಿಷ್ಟ ಸೇವಾವಧಿಯನ್ನು ಪೂರ್ಣಗೊಳಿಸದೇ ಇರುವ ಯಾವುದೇ ಅಧಿಕಾರಿ ಮತ್ತು ನೌಕರರನ್ನು ವರ್ಗಾವಣೆ ಮಾಡುವಂತಿಲ್ಲ.

ಕೆಲವು ವರ್ಷಗಳ ಕಾಲ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಸಾಮಾನ್ಯ ವರ್ಗಾವಣೆ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರಗಳಿಗೆ ನೀಡಲಾಗಿತ್ತು. ನೇಮಕಾತಿ ಪ್ರಾಧಿಕಾರಗಳು ಆಯಾ ಇಲಾಖೆಯ ಉಸ್ತುವಾರಿ ಹೊಂದಿರುವ ಸಚಿವರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಹೊರಡಿಸುತ್ತಿದ್ದವು.

2019ರಲ್ಲಿ ಬಿ, ಸಿ ಮತ್ತು ಡಿ ರ್ಜೆ ಅಧಿಕಾರಿಗಳು ಹಾಗೂ ನೌಕರರ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ಪ್ರತ್ಯಾಯೋಜನೆ ಮಾಡಲಾಗಿತ್ತು. 2020ರಲ್ಲಿ ಕೋವಿಡ್‌ ಕಾರಣದಿಂದ ಸರ್ಕಾರಿ ನೌಕರರ ವರ್ಗಾವಣೆಗೆ ನಿಯಂತ್ರಣ ಹೇರಿದ್ದಾಗ, ಮುಖ್ಯಮಂತ್ರಿಯವರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಹೊರಡಿಸಲು ಅವಕಾಶ ನೀಡಲಾಗಿತ್ತು. 2021ರಲ್ಲಿ ಪುನಃ ಸಚಿವರಿಗೆ ವರ್ಗಾವಣೆ ಅಧಿಕಾರ ನೀಡಲಾಗಿತ್ತು. ಈ ವರ್ಷ ಅದೇ ವ್ಯವಸ್ಥೆ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.